
ಬೆಂಗಳೂರು, ಮಾರ್ಚ್ 17: ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಬ್ಯುಸಿನೆಸ್ ಲೆಡ್ಜರ್ ಆ್ಯಪ್ ಖಾತಾಬುಕ್ಕಿನೊಳಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂಟ್ರಿ ಕೊಟ್ಟಿದ್ದಾರೆ. ಅಂದರೆ ಖಾತಾಬುಕ್ಕಿಗೆ ಇಕ್ವಿಟಿ ಫಂಡ್ ನೀಡುವ ಮೂಲಕ ವ್ಯವಹಾರಕ್ಕೆ ಸಂಬಂಧಿಸಿ ಧೋನಿ ಮತ್ತೊಂದು ಖಾತೆ ತೆರೆದಿದ್ದಾರೆ.
ಕೂಲ್ ಕ್ಯಾಪ್ಟನ್ ನೀಡಿರುವ ಈಕ್ವಿಟಿ ಫಂಡ್ ಎಷ್ಟು ಮೌಲ್ಯದ್ದು ಎಂದು ಎಲ್ಲೂ ಹೇಳಿಲ್ಲ. ಆದರೆ ಖಾತಾಬುಕ್ಕಿನಲ್ಲಿ ಹೂಡಿಕೆ ಮಾಡಿರುವ ಧೋನಿ ಇನ್ಮುಂದೆ ಅದರ ಪ್ರಚಾರ ರಾಯಭಾರಿಯಾಗಿಯೂ ಇರಲಿದ್ದಾರೆ. ಧೋನಿ ಈಗಾಗಲೇ ಬಹಳಷ್ಟು ಕಂಪನಿಗಳಿಗೆ ಹೂಡಿಕೆ ಮಾಡಿದ್ದಾರೆ.
ಖಾತಾಬುಕ್ ಆ್ಯಪ್ ಎಂದರೆ ಇದು ಸಣ್ಣ ಅಂಗಡಿ ಮಾಲಕರಿಗೆ, ಅಂಗಡಿಯನ್ನಿಟ್ಟುಕೊಂಡವರಿಗೆ ವ್ಯವಹಾರಕ್ಕೆ ಸಂಬಂಧಿಸಿ ಲೆಕ್ಕಾಚಾರ ಬರೆದಿಟ್ಟುಕೊಳ್ಳಲು ಸಹಾಯ ಮಾಡುವ ತಂತ್ರಾಂಶ. ಖಾತಾಬುಕ್ ಆ್ಯಪ್ ಮುಂದಿನ 12 ತಿಂಗಳುಗಳಲ್ಲಿ ಸುಮಾರು 2 ಕೋಟಿ ವ್ಯಾಪಾರಿಗಳನ್ನು ತಲುಪುವ ಗುರಿ ಹೊಂದಿದೆ.
ಖಾತಾಬುಕ್‌ನ ಸಹ ಸ್ಥಾಪಕಾಧ್ಯಕ್ಷ ಮತ್ತು ಸಿಇಒ ರವೀಶ್ ನರೇಶ್, 'ಖಾತಾಬುಕ್ ಕುಟುಂಬಕ್ಕೆ ಮಾಹಿಯನ್ನು ಸ್ವಾಗತಿಸುವುದಕ್ಕೆ ನಮಗೆಲ್ಲರಿಗೂ ರೋಮಾಂಚನವಾಗುತ್ತಿದೆ. ಧೋನಿ ನಿಜವಾದ ಕ್ರೀಡಾಪಟುತ್ವ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಸಾಕಾರಗೊಳಿಸಲಿದ್ದಾರೆ,' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.