ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಉನ್ನತ ಸಾಧನೆಗಳನ್ನು ಹೊಂದಿದ್ದಾರೆ. ಬ್ಯಾಟರ್ ಮತ್ತು ವಿಕೆಟ್ ಕೀಪರ್ ಜೊತೆಗೆ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ.
2013ರ ಜೂನ್ 23 ಕ್ರಿಕೆಟ್ ಮೈದಾನದಲ್ಲಿ ಭಾರತ ತಂಡಕ್ಕೆ ಸ್ಮರಣೀಯ ದಿನವಾಗಿದೆ. ಎಂಎಸ್ ಧೋನಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಎಲ್ಲಾ ಮೂರು ಐಸಿಸಿ ಪಂದ್ಯಾವಳಿಗಳಾದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶ್ವದ ಮೊದಲ ನಾಯಕರೆನಿಸಿದರು.

ಜೂನ್ 23, 2013ರಂದು ಭಾರತ ತಂಡ ಮೊದಲ ಬಾರಿಗೆ ಇಂಗ್ಲೆಂಡ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಳೆದ ಒಂದು ದಶಕದಿಂದ ಐಸಿಸಿ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಭಾರತ ಕ್ರಿಕೆಟ್ ತಂಡ ಗೆದ್ದಿರುವ ಕೊನೆಯ ಐಸಿಸಿ ಪ್ರಶಸ್ತಿಯೂ ಇದಾಗಿದೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮಳೆ-ಬಾಧಿತ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದ ಭಾರತ ತಂಡವನ್ನು ಎಂಎಸ್ ಧೋನಿ ಯಶಸ್ವಿಯಾಗಿ ಮುನ್ನಡೆಸಿದರು.
ಮಳೆಯಿಂದಾಗಿ 50 ಓವರ್‌ಗಳ ಪಂದ್ಯವನ್ನು 20 ಓವರ್‌ಗಳಿಗೆ ಇಳಿಸಲಾಯಿತು. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡವು ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿತು. ಆಗ ಟೀಂ ಇಂಡಿಯಾ 7 ವಿಕೆಟ್‌ಗೆ 129 ರನ್‌ಗಳನ್ನು ಮಾತ್ರ ಕಲೆಹಾಕಿತು.

ಭಾರತ ತಂಡ ಮೊದಲ 13 ಓವರ್‌ಗಳಲ್ಲಿ 66 ರನ್ ಗಳಿಸಿ ಐದು ವಿಕೆಟ್‌ಗಳನ್ನು ಕಳೆದುಕೊಂಡುತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆಗ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ 47 ರನ್‌ಗಳ ಜೊತೆಯಾಟ ನಿರ್ಮಿಸಿ ಭಾರತದ ಇನ್ನಿಂಗ್ಸ್‌ಗೆ ಮರುಜೀವ ನೀಡಿದರು.
34 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದ ವಿರಾಟ್ ಕೊಹ್ಲಿ ಭಾರತ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ 25 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ ಅಜೇಯ 33 ರನ್ ಗಳಿಸಿದರು. ಆರಂಭಿಕ ಶಿಖರ್ ಧವನ್ 31 ರನ್ ಗಳಿಸಿ ರವಿ ಬೋಪಾರಗೆ ವಿಕೆಟ್ ಒಪ್ಪಿಸಿದ್ದರು. ಇಂಗ್ಲೆಂಡ್ ಪರ ರವಿ ಬೋಪಾರಾ 4 ಓವರ್‌ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದಿದ್ದರು.
130 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡ 9 ಓವರ್‌ಗಳಿಗೆ 4 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿತ್ತು. ಆಗ ನಾಯಕ ಇಯಾನ್ ಮಾರ್ಗನ್ ಮತ್ತು ರವಿ ಬೋಪಾರಾ ಐದನೇ ವಿಕೆಟ್‌ಗೆ 64 ರನ್‌ಗಳ ಜೊತೆಯಾಟದಿಂದ ಆಂಗ್ಲರ ತಂಡವನ್ನು ಗೆಲುವಿನ ಹಾದಿಗೆ ತಂದರು.
18ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಅವರಿಗೆ ಚೆಂಡು ನೀಡುವ ಮೂಲಕ ಎಂಎಸ್ ಧೋನಿ ಮಾಸ್ಟರ್-ಸ್ಟ್ರೋಕ್ ನೀಡಲು ಮುಂದಾದರು. ಇಶಾಂತ್ ಶರ್ಮಾ 18ನೇ ಓವರ್‌ನ ಮೊದಲ ಎರಡು ಎಸೆತಗಳಲ್ಲಿ 8 ರನ್‌ಗಳನ್ನು ಬಿಟ್ಟುಕೊಟ್ಟರು. ಅದೇ ಓವರ್‌ನಲ್ಲಿ ಇಯಾನ್ ಮಾರ್ಗನ್ ಮತ್ತು ರವಿ ಬೋಪಾರಾ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಯಶಸ್ಸು ತಂದುಕೊಟ್ಟರು.
ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲು 15 ರನ್‌ಗಳ ಅಗತ್ಯವಿದ್ದಾಗ, ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತ ತಂಡವನ್ನು ಗೆಲುವಿನ ದಡ ಸೇರಿಸದರು. ಆಗ ಎಂಎಸ್ ಧೋನಿ ಅವರು ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಮೊದಲ ನಾಯಕ ಎನಿಸಿಕೊಂಡರು.