
ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳೋದೇ ಬಲು ಅಪರೂಪ. ತೀರಾ ಅಪರೂಪಕ್ಕೆ ಧೋನಿ ಸೋಶಿಯಲ್ ಮೀಡಿಯಾಕ್ಕೆ ಬರುತ್ತಾರೆ. ದೀರ್ಘ ಕಾಲದ ಬಳಿಕ ಧೋನಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.
ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಸಾರಿ ಬಂದಾಗಲೂ ಮಾರ್ಮಿಕ ರೀತಿಯಲ್ಲಿ ಪೋಸ್ಟ್ ಹಾಕುತ್ತಾರೆ. ಈ ಬಾರಿಯೂ ಅಂಥದ್ದೇ ಪೋಸ್ಟ್ ಹಾಕಿಕೊಂಡಿದ್ದಾರೆ. ಧೋನಿ ಕಡೇಯಸಾರಿ ಕಳೆದ ಸೆಪ್ಟೆಂಬರ್ 10ಕ್ಕೆ ಹಾಕಿದ್ದ ಪೋಸ್ಟ್ ರಾಫೇಲ್ ವಿಮಾನಕ್ಕೆ ಸಂಬಂಧಿಸಿದ್ದು. ಈ ಬಾರಿ ಕೃಷಿಗೆ ಸಂಬಂಧಿಸಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿರುವುದರಿಂದ ಧೋನಿ ಬಿಡುವಿನ ವೇಳೆ ತನ್ನ ಫಾರ್ಮ್‌ಗೆ ಹೋಗಿ ಕೃಷಿ ಸಂಬಂಧಿಸಿ ಕೆಲಸದಲ್ಲಿ ತೊಡಗುತ್ತಿದ್ದಾರೆ. ಕೃಷಿ, ಮಾರುಕಟ್ಟೆ, ಸ್ಪೋರ್ಟ್ಸ್ ಕ್ಲಬ್ ಇಂಥ ಉದ್ಯಮಗಳತ್ತ ಧೋನಿ ಮುಖ ಮಾಡುತ್ತಿದ್ದಾರೆ.
ಜನವರಿ 8ರ ಶುಕ್ರವಾರ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿ ತನ್ನ ಫಾರ್ಮ್‌ನಲ್ಲಿ ಬೆಳೆದ ಸ್ಟ್ರಾಬೆರಿಯ ಫೋಟೋ ಹಾಕಿದ್ದಾರೆ. ಜೊತೆಗೆ, 'ನಾನು ದಿನಾ ಫಾರ್ಮ್‌ಗೆ ಹೋಗುವುದನ್ನು ಮುಂದುವರೆಸಿದರೆ ಮಾರುಕಟ್ಟೆಗೆ ಹೋಗಲು ಅಲ್ಲಿ ಒಂದು ಸ್ಟ್ರಾಬೆರಿಯೂ ಉಳಿಯೋಲ್ಲ' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಅಂದರೆ ಸ್ಟ್ರಾಬೆರಿಗಳನ್ನು ನಾನೇ ಪೂರ್ತಿ ತಿಂದುಹಾಕುತ್ತೇನೆ ಎಂದು ಧೋನಿ ತಮಾಷೆಯಾಗಿ ಹೇಳಿದ್ದಾರೆ.