ಎಲ್ಲರಿಗೂ ದಿಗಿಲು ಹುಟ್ಟಿಸಿದ್ದ ಧೋನಿಯ ನಾಲ್ಕು ಅಚ್ಚರಿಯ ನಿರ್ಧಾರಗಳು

ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ ಟೀಮ್ ಇಂಡಿಯಾದ ಅತ್ಯಂತ ಚಾಣಾಕ್ಷ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ನಾಯಕತ್ವದಲ್ಲಿ ಧೋನಿ ಟೀಮ್ ಇಂಡಿಯಾಗೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಏಕದಿನ ಮತ್ತು ಟಿ20 ವಿಶ್ವಕಪ್‌ಗೆ ಭಾರತ ಮುತ್ತಿಕ್ಕಿತ್ತು. ಈ ವಿಶೇಷ ಸಾಧನೆಯನ್ನು ಮಾಡಿದ ಧೋನಿ ಇಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.
ಟೀಮ್ ಇಂಡಿಯಾದ ನಾಯಕನಾಗಿದ್ದ ವೇಳೆ ಧೋನಿ ಟೀಮ್ ಇಂಡಿಯಾ ಪರವಾಗಿ ಕೆಲ ಊಹೆಗೂ ಮೀರಿದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳು ಎಲ್ಲರನ್ನೂ ಅಚ್ಚರಿಗೆ ತಳ್ಳುತ್ತಿತ್ತು. ಆದರೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಧೋನಿಯ ನಿರ್ಧಾರಗಳು ಫಲಿತಾಂಶವನ್ನು ನೀಡುತ್ತಿದ್ದವು.
ನಾಯಕನಾಗಿದ್ದ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ಅಚ್ಚರಿ ಹುಟ್ಟಿಸುವಂತಾ 4 ನಿರ್ಧಾರಗಳನ್ನು ಮುಂದೆ ಓದಿ..

2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಅಂತಿಮ ಓವರ್
ಟಿ20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶ ಪಡೆದುಕೊಳ್ಳುವಲ್ಲಿ ಸಫಲವಾಗಿತ್ತು. ಟೀಮ್ ಇಂಡಿಯಾಗೆ ಫೈನಲ್‌ನಲ್ಲಿ ಎದುರಾಗಿದ್ದು ಬದ್ಧ ಎದುರಾಳಿ ಪಾಕಿಸ್ತಾನ. ಟೀಮ್ ಇಂಡಿಯಾ ನೀಡಿದ್ದ ಗುರಿಯನ್ನು ಪಾಕಿಸ್ತಾನ ಬೆನ್ನಟ್ಟಿತ್ತು. ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ಗಳ ಅವಶ್ಯಕತೆಯಿತ್ತು. ಪಾಕ್ ತನ್ನ 9 ವಿಕೆಟ್ ಕಳೆದುಕೊಮಡಿತ್ತು. ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿದ್ದರು.

ಜೋಗಿಂದರ್ ಕೈಗೆ ಬಾಲ್ ನೀಡಿ ಶಾಕ್ ಕೊಟ್ಟ ಧೋನಿ
ಧೋನಿಯ ಮುಂದೆ ಈ ಸಂದರ್ಭದಲ್ಲಿ ಎರಡು ಆಯ್ಕೆಗಳಿತ್ತು. ಅನುಭವಿ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಕೋಟಾ ಇನ್ನೂ ಮುಗಿದಿರಲಿಲ್ಲ. ಮತ್ತೊಂದೆಡೆ ಯುವ ಆಟಗಾರ ಜೋಗಿಂದರ್ ಶರ್ಮಾ ಕೂಡ ಇದ್ದರು. ಎಲ್ಲರೂ ಅನುಭವಿ ಹರ್ಭಜನ್ ಸಿಂಗ್ ಕೈಗೆ ಬಾಲ್ ನೀಡುತ್ತಾರೆ ಎಂದೇ ಭಾವಿಸಿದ್ದರು. ಆದರೆ ಧೋನಿ ಬಾಲ್ ನೀಡಿದ್ದು ಜೋಗಿಂದರ್ ಶರ್ಮಾಗೆ. ಮೊದಲೆರಡು ಎಸೆತದಲ್ಲಿ ಸಿಕ್ಸರ್ ಸಹಿತ ರನ್ ನೀಡಿದ ಜೋಗಿಂದರ್ ಶರ್ಮಾ ಧೋನಿ ನಿರ್ಧಾರವನ್ನು ತಲೆಕೆಳಗೆ ಮಾಡುತ್ತಾರೆ ಎಂದೇ ಎಲ್ಲಾರೂ ಭಾವಿಸಿದ್ದರು. ಆದರೆ ಮುಂದಿನ ಎಸೆತದಲ್ಲಿ ಮಿಸ್ಬಾ ಉಲ್ ಹಕಲ್ ವಿಕೆಟ್ ಪಡೆದು ಟೀಮ್ ಇಂಡಿಯಾ ಗೆಲುವಿಗೆ ಕಾರಣರಾದರು.

2011ರ ವಿಶ್ವಕಪ್ ಫೈನಲ್‌ನಲ್ಲಿ ಮತ್ತೊಂದು ಅಚ್ಚರಿ
ಧೋನಿ ತೆಗೆದುಕೊಂಡ ಮತ್ತೊಂದು ಅಚ್ಚರಿಯ ನಿರ್ಧಾರವೆಂದರೆ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದ ಫೈನಲ್ ಪಂದ್ಯದಲ್ಲಿ. ಟೀಮ್ ಇಂಡಿಯಾ ಗೆಲ್ಲಲು 28.2 ಓವರ್‌ಗಳಲ್ಲಿ 161ರನ್‌ಗಳ ಅವಶ್ಯಕತೆಯಿತ್ತು. ಟೀಮ್ ಇಂಡಿಯಾ ತನ್ನ ಮೂರು ವಿಕೆಟ್ ಕಳೆದುಕೊಂಡಿತ್ತು. ಮೂರನೇ ವಿಕೆಟ್ ಕೊಹ್ಲಿ ಔಟಾಗುತ್ತಿದ್ದಂತೆಯೇ ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದ ಯುವರಾಜ್ ಅಂಗಳಕ್ಕಿಳಿಯಬೇಕಿತ್ತು.

ಯುವಿ ಬದಲು ತಾನೇ ಅಂಗಳಕ್ಕಿಳಿದ ಧೋನಿ
ಕ್ರಿಕೆಟ್‌ನ ಅಭಿಮಾನಿಗಳು ಇಂತಾ ಸಂದರ್ಭದಲ್ಲಿ ಯುವರಾಜ್ ಸಿಂಗ್ ಅಂಗಳದಕ್ಕಿಳಿಯುವುದನ್ನು ಎದುರುನೋಡುತ್ತಿದ್ದರು. ಕ್ರಮಾಂಕದ ಪ್ರಕಾರ ಯುವಿಯೇ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಯುವಿಯ ಬದಲು ಟೀಮ್ ಇಂಡಿಯಾ ನಾಯಕ ಧೋನಿ ತಾನೇ ಆಡಲು ಬಯಸಿದ್ದರು. ಮಾತ್ರವಲ್ಲ ಗೌತಮ್ ಗಂಭೀರ್ ಜೊಯೆಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು. ಈ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಗಳಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ವಿವಾದಿತ ರೊಟೇಶನ್ ಪದ್ದತಿ
ಮಹೇಂದ್ರ ಸಿಂಗ್ ಧೋನಿಯ ವಿವಾದಿತ ನಿರ್ಧಾರವೆಂದರೆ ಅದು 2012ರ ಏಕದಿನ ತ್ರಿಕೋನ ಸರಣಿಯ ನಿರ್ಧಾರ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಈ ಸರಣಿಯಲ್ಲಿ ಪಾಲ್ಗೊಂಡಿತ್ತು. ಟೀಮ್ ಇಂಡಿಯಾದ ಅಗ್ರ ಮೂವರು ಆಟಗಾರರಿಗೆ ರೊಟೇಶನ್ ಪದ್ದತಿಯನ್ನು ಮಾಡಿದರು. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಅವರಿಗೆ ರೊಟೆಶನ್ ಆಧಾರದಲ್ಲಿ ವಿಶ್ರಾಂತಿ ನೀಡಲು ತೀರ್ಮಾನಿದ್ದರು.

ಈ ಪ್ರಯತ್ನದಲ್ಲಿ ಧೋನಿ ವೈಫಲ್ಯ
ರೊಟೇಶನ್ ಪದ್ದತಿಯಲ್ಲಿ ಧೋನಿ ವೈಫಲ್ಯವನ್ನು ಕಂಡರು. ಈ ನಿರ್ಧಾರ ಸಾಕಷ್ಟು ಚರ್ಚೆಗೂ ಕಾರಣವಾಯಿತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸದೆಯೇ ಹೊರಬಿತ್ತು. ಆದರೆ ತಮ್ಮ ನಿರ್ಧಾರವನ್ನು ಧೋನಿ ಸಮರ್ಥಿಸಿಕೊಂಡರು. ಆಟಗಾರರು ಗಾಯಗೊಳ್ಳದಂತೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ಕಾರಣ ನೀಡಿದ್ದರು. ಈ ನಿರ್ಧಾರದ ಬಗ್ಗೆ ಗೌತಮ್ ಗಂಭೀರ್ ತಮ್ಮ ನಿವೃತ್ತಿಯ ಬಳಿಕ ಧೋನಿಯನ್ನು ಟೀಕಿಸಿದ್ದರು.

ಐಪಿಎಲ್‌ನಲ್ಲಿ ಡ್ಯಾಡ್ಸ್ ಆರ್ಮಿ
ಐಪಿಎಲ್‌ನಲ್ಲಿ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎರಡು ವರ್ಷಗಳ ನಿಷೇಧವನ್ನು ಪೂರ್ಣಗೊಳಿಸಿ ಕಮ್‌ಬ್ಯಾಕ್ ಮಾಡಿತ್ತು. ಈ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸದಾಗಿ ಆಯ್ಕೆ ಮಾಡಿಕೊಳ್ಳುವಾಗಲೂ ಹಿರಿಯ ಆಟಗಾರರನ್ನೇ ತಂಡಕ್ಕೆ ಸೇರ್ಪಡೆಗೊಳಿಸಿತು. ತಂಡದ ಎಲ್ಲಾ ಆಟಗಾರರೂ 30 ವರ್ಷ ಮೇಲ್ಪಟ್ಟವರೇ ಆಗಿದ್ದರು. ಕೆಲವರಂತೂ 40ರ ಆಸುಪಾಸಿನಲ್ಲಿದ್ದರು. ಈ ಕಾರಣಕ್ಕೆ ಈ ತಂಡವನ್ನು ಡ್ಯಾಡ್ಸ್ ಆರ್ಮಿ ಎಂದು ತಮಾಷೆಯಾಡಲು ಆರಂಭಿಸಿದರು. ಆದರೆ ಹಿರಿಯ ಆಟಗಾರರ ಅದ್ಭುತ ಪ್ರದರ್ಶನದೊಂದಿಗೆ ಚೆನ್ನೈ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications