
ಅದೃಷ್ಟವಂತ ಪ್ರಣವ್
ಧೋನಿಯ ಅದ್ಭುತ ಬ್ಯಾಟಿಂಗ್ ನೋಡಿದ ಆ 2005ರಿಂದಲೇ ಪ್ರಣವ್ ಎಂಎಸ್‌ಡಿ ಬೆನ್ನು ಬೀಳೋದನ್ನು ಶುರುವಿಟ್ಟುಕೊಂಡರು. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಸ್ಟೇಡಿಯಂಗಳು, ಹೋಟೆಲ್‌ಗಳು, ಇನ್ನಿತರ ಕಾರ್ಯಕ್ರಮಗಳು ಎಲ್ಲೇ ಧೋನಿ ಸಿಕ್ಕರೂ ಪ್ರಣವ್ ಧೋನಿಯ ಜೊತೆ ಒಂದಿಷ್ಟು ಕ್ಷಣ ಕಳೆಯುತ್ತಾರೆ. ಧೋನಿಯ ಜೊತೆ ಅವಿಸ್ಮರಣೀಯ ಕ್ಷಣ ಕಳೆಯುವ ಅವಕಾಶ ಪ್ರಣವ್‌ಗೆ ಬಹಳಷ್ಟು ಸಾರಿ ಸಿಕ್ಕಿದೆ.

ಯುಎಇಗೆ ಹೋಗಲು ಯೋಚನೆ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಹೇಳಿದ್ದಾಗಿದೆ. ಆದರೆ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿದ್ದಾರೆ. ಹೀಗಾಗಿ 'ಕೂಲ್ ಕ್ಯಾಪ್ಟನ್'ನ ಆಟ ನೋಡುವುದಕ್ಕೋಸ್ಕರವೇ ಪ್ರಣವ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಹೋಗಲು ಯೋಚಿಸುತ್ತಿದ್ದಾರೆ. 'ನಾನು ಧೋನಿ ಪಂದ್ಯ ವೀಕ್ಷಿಸುವುದಕ್ಕೋಸ್ಕರ ಯುಎಇಗೆ ಹೋಗಲು ಯೋಚಿಸುತ್ತಿದ್ದೇನೆ. ಆದರೆ ಕೊರೊನಾವೈರಸ್ ಕಾರಣ ಅಲ್ಲಿ ವೀಕ್ಷಕರಿಗೆ ಸ್ಟೇಡಿಯಂ ಒಳಗೆ ಅವಕಾಶ ಮಾಡಿಕೊಡುತ್ತಾರೋ ಇಲ್ಲವೋ ಎಂಬುದನ್ನು ಖಾತರಿಪಡಿಸಿಕೊಳ್ಳಲು ಕಾಯುತ್ತಿದ್ದೇನೆ,' ಎಂದು ಏಷ್ಯಾನೆಟ್ ನ್ಯೂಸ್ ಜೊತೆ ಮಾತನಾಡಿದ ಪ್ರಣವ್ ಹೇಳಿಕೊಂಡಿದ್ದಾರೆ.

ದಾಖಲೆ ಪೂರೈಸುವ ತವಕ
ಮಾತು ಮುಂದುವರೆಸಿದ 24ರ ಹರೆಯದ ಪ್ರಣವ್, 'ಈವತ್ತಿನವರೆಗೆ ನನ್ನಲ್ಲಿ ಧೋನಿಯ 165 ಆಟೋಗ್ರಾಫ್‌ಗಳಿವೆ. ಕ್ರಿಕೆಟ್ ಬ್ಯಾಟ್‌ಗಳು, ಮ್ಯಾಚ್ ಟಿಕೇಟ್‌ಗಳು, ಸ್ಟ್ಯಾಂಪ್‌ಗಳು, ಮಿನಿಯೇಚರ್ ಬ್ಯಾಟ್‌ಗಳು, ಫೋಟೋಗಳು ಇನ್ನಿತರ ವಸ್ತುಗಳ ಮೇಲೆ ಧೋನಿಯ ಹಸ್ತಾಕ್ಷರ ಪಡೆದು ಸಂಗ್ರಹಿಸಿಟ್ಟಿದ್ದೇನೆ. ಈ ಆಟೋಗ್ರಾಫ್‌ಗಳನ್ನು 183 ಸಂಖ್ಯೆಗೆ ಮುಟ್ಟಿಸೋದು ನನ್ನ ಕನಸು. 183 ನಂಬರ್ ಯಾಕೆಂದರೆ ಧೋನಿ ಅವರು 2005ರಲ್ಲಿ ಜೈಪುರದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಅಜೇಯ 183 ರನ್ ಬಾರಿಸಿದ್ದರು ಅದಕ್ಕೆ,' ಎಂದರು. ಏಕದಿನದಲ್ಲಿ ಧೋನಿಯ ವೈಯಕ್ತಿಕ ಅತ್ಯಧಿಕ ರನ್ ಕೂಡ 183.

ಧೋನಿ ಚಿತ್ರಕ್ಕೆ ಗಡ್ಡ ಬಿಡಿಸಿದ್ದ ಯುವಿ
ಧೋನಿಯನ್ನು ತಾನು ಮೊದಲು ಭೇಟಿಯಾದ ಕ್ಷಣವನ್ನು ನೆನಪಿಸಿಕೊಂಡ ಪ್ರಣವ್ ಮತ್ತೊಂದು ಗಮ್ಮತ್ತಿನ ಸಂಗತಿಯೂ ಹೇಳಿಕೊಂಡಿದ್ದಾರೆ. 2007ರಲ್ಲಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಹೊರಗೆ ಧೋನಿಗಾಗಿ ಕಾಯುತ್ತಿದ್ದಾಗ ಯುವರಾಜ್ ಸಿಂಗ್ ಕಣ್ಣಿಗೆ ಧೋನಿ ಚಿತ್ರಗಳಿದ್ದ ಪ್ರಣವ್ ಅವರ ಪುಸ್ತಕ ಕಣ್ಣಿಗೆ ಬಿತ್ತಂತೆ. ಆ ಪುಸ್ತಕ ಎತ್ತಿಕೊಂಡ ಯುವಿ, ಧೋನಿಯ ಚಿತ್ರವೊಂದಕ್ಕೆ ಗಡ್ಡ ಗೀಚಿ ಮತ್ತೆ ಪ್ರಣವ್ ಕೈಯಲ್ಲಿ ಕೊಟ್ಟು 'ಇದನ್ನು ಧೋನಿಗೆ ತೋರಿಸು,' ಅಂತ ತರಲೆ ಮಾಡಿದ್ದರಂತೆ.

ಭಾರತ-ಪಾಕ್ ಸರಣಿಯ ಫಲಿತಾಂಶ
ಸ್ಟೋರಿಯ ಆರಂಭದಲ್ಲಿ ಧೋನಿ ಅವರು ಪಾಕ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 148 ರನ್ ಬಾರಿಸಿದ್ದರು ಅಂದೆವಲ್ಲ?, ಆ ಪಂದ್ಯದಲ್ಲಿ ಭಾರತ 58 ರನ್‌ಗಳಿಂದ ಜಯಿಸಿತ್ತು. ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಗೆದ್ದಿದ್ದರು. ಆದರೆ 6 ಪಂದ್ಯಗಳ ಏಕದಿನ ಸರಣಿಯಲ್ಲಿ ಸೌರವ್ ಗಂಗೂಲಿ ನಾಯಕತ್ವದ ಭಾರತ ತಂಡ 4-2ರಿಂದ ಸೋತಿತ್ತು.


Click it and Unblock the Notifications
