
ನವದೆಹಲಿ, ಏಪ್ರಿಲ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಟೀಮ್ ಇಂಡಿಯಾಕ್ಕೆ ವಾಪಸ್ಸಾಗುವ ತಯಾರಿಯಲ್ಲಿ ಮಾಜಿ ನಾಯಕ ಎಂಎಸ್ ಧೋನಿಯಿದ್ದರು. ಆದರೆ ಕೊರೊನಾವೈರಸ್ ಸೋಂಕು ಐಪಿಎಲ್ ನಡೆಯಲು ಬಿಡಲೇಯಿಲ್ಲ. ಅತ್ತ ಧೋನಿ ಕೂಡ ಪ್ರ್ಯಾಕ್ಟೀಸ್ ನಿಲ್ಲಿಸಿ ಲಾಕ್‌ಡೌನ್‌ನಲ್ಲಿ ಬಂಧಿಯಾಗಬೇಕಾಗಿ ಬಂದಿದೆ.
ಭಾರತದಾದ್ಯಂತ ಲಾಕ್‌ಡೌನ್ ವಿಧಿಸಲಾಗಿರುವುದರಿಂದ ವೃತ್ತಿ ಜೀವನದಲ್ಲಿ ಬಹುಕಾಲ ಕುಟುಂಬದಿಂದ ಅನಿವಾರ್ಯವಾಗಿ ದೂರವೇ ಇರುವ ಕ್ರಿಕೆಟಿಗರಿಗೆ ಕುಟುಂಬದೊಂದಿಗೆ ಕಳೆಯಲು ಅವಕಾಶ ಲಭಿಸಿದೆ. ಎಂಎಸ್ ಧೋನಿ ಕೂಡ ಬಿಡುವಿನ ವೇಳೆಯನ್ನು ಪತ್ನಿ ಸಾಕ್ಷಿ ಧೋನಿ ಮತ್ತು ಜೀವ ಜೊತೆ ಕಳೆಯುತ್ತಿದ್ದಾರೆ.
ಧೋನಿ ಪತ್ನಿ ಸಾಕ್ಷಿ ಧೋನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮುದ್ದಾದ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಧೋನಿ ಮತ್ತು ಸಾಕ್ಷಿ ಬೆಡ್‌ರೂಮಿನಲ್ಲಿರುವ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಮಿಸ್ಟರ್ ಸ್ವೀಟಿಯಿಂದ ನೀವು ಗಮನ ಹರಿಸಿಕೊಳ್ಳುವ ಸಮಯ. ವೀಡಿಯೋ ಗೇಮ್ಸ್ vs ವೈಫ್' ಎಂದು ಇನ್‌ಸ್ಟಾಗ್ರಾಮ್ ಚಿತ್ರದಲ್ಲಿ ಸಾಕ್ಷಿ ಬರೆದುಕೊಂಡಿದ್ದಾರೆ. ಈ ಚಿತ್ರ ಟ್ವಿಟರ್‌ನಲ್ಲಿ ಟ್ರೋಲ್‌ಗೂ ಗುರಿಯಾಗಿದೆ.
ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಹೊರ ಬಿದ್ದಿತ್ತು. ಧೋನಿ ಆಡಿದ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಅದೇ. ಆ ಬಳಿಕ ಧೋನಿ ಯಾವುದೇ ಪಂದ್ಯವನ್ನಾಡಿಲ್ಲ. ಐಪಿಎಲ್ ಬಳಿಕ ಧೋನಿ ಮತ್ತೆ ಕ್ರಿಕೆಟ್ ಅಂಗಳಕ್ಕೆ ಬರಲಿದೆ ಎಂದುಕೊಳ್ಳುವಷ್ಟರಲ್ಲಿ ಕೊರೊನಾದಿಂದಾಗಿ ಐಪಿಎಲ್ ಟೂರ್ನಿಯೇ ರದ್ದಾಗಿಬಿಟ್ಟಿದೆ.