ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದೊಡ್ಡ ಇತಿಹಾಸವನ್ನು ನಿರ್ಮಿಸಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದದ ಪಂದ್ಯದಲ್ಲಿ ಧೋನಿ ಅಂಗಳಕ್ಕೆ ಇಳಿಯುತ್ತಿದ್ದಂತೆ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ, ಈಗ ಬರೀ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಒಂದು ಝಲಕ್ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಮೈದಾನದತ್ತ ಆಗಮಿಸುತ್ತಿದ್ದಾರೆ. ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿರುವ ಧೋನಿ ಮತ್ತೊಂದು ದಾಖಲೆ ಬರೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ.

ಏಪ್ರಿಲ್ 25 ರಂದು ಚೆನ್ನೈನಲ್ಲಿ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಟಾಸ್ ಮಾಡಲು ಮೈದಾನಕ್ಕೆ ಇಳಿಯುತ್ತಿದ್ದಂತೆ ಎಲೈಟ್ ಕ್ಲಬ್‌ಗೆ ಧೋನಿ ಎಂಟ್ರಿ ಪಡೆಯಲಿದ್ದಾರೆ. ಈ ಮೂಲಕ ಧೋನಿ ಟಿ20 ಕ್ರಿಕೆಟ್‌ನಲ್ಲಿ 400ನೇ ಪಂದ್ಯವನ್ನು ಆಡಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಲಿರುವ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆ ಧೋನಿ ಅವರದ್ದಾಗಲಿದೆ.
ಭಾರತದ ಪರ ಅತಿ ಹೆಚ್ಚು ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರು 456 ಪಂದ್ಯಗಳನ್ನು ಆಡಿದ ಹಿರಿಮೆಯನ್ನು ಹೊಂದಿದ್ದಾರೆ. ಇವರ ಬಳಿಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ದಿನೇಶ್ ಕಾರ್ತಿ ಇದ್ದು ಇವರು 412 ಪಂದ್ಯ ಆಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 408 ಪಂದ್ಯಗಳನ್ನು ಆಡಿದ ಹಿರಿಮೆ ಹೊಂದಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಈ ವರೆಗೆ 272 ಟಿ20 ಪಂದ್ಯಗಳನ್ನು ಆಡಿದ್ದು, 38ರ ಸರಾಸರಿಯಲ್ಲಿ 5377 ರನ್ ಸಿಡಿಸಿದ್ದಾರೆ. ಈ ವೇಳೆ 24 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಈ ವೇಳೆ ಧೋನಿ 373 ಬೌಂಡರಿ, 260 ಸಿಕ್ಸರ್ ಸಿಡಿಸಿದ ಹಿರಿಮೆ ಹೊಂದಿದ್ದಾರೆ. ಇನ್ನು ವಿಕೆಟ್ ಹಿಂದೆಯೂ 200ಕ್ಕೂ ಹೆಚ್ಚು ವಿಕೆಟ್ ಪಡೆದ ಗರಿ ತಮ್ಮದಾಗಿಸಿಕೊಂಡಿದ್ದಾರೆ.
ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ಪರ ಹಲವು ದಾಖಲೆಗಳನ್ನು ಮಾಡಿದ್ದಾರೆ. ಮಾಹಿ ಐಸಿಸಿಯ ಆಯೋಜಿತ 2011ರ ಏಕದಿನ ವಿಶ್ವಕಪ್, 2007 ಟಿ20 ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಐಸಿಸಿ ಆಯೋಜಿತ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಮೋಘ ದಾಖಲೆಯನ್ನು ಹೊಂದಿದೆ. ಚೆನ್ನೈನಲ್ಲಿ ಸನ್ ವಿರುದ್ಧ ಸಿಎಸ್‌ಕೆ ಒಮ್ಮೆಯೂ ತವರಿನಲ್ಲಿ ಸೋಲು ಕಂಡಿಲ್ಲ. ಹೀಗಾಗಿ ಶುಕ್ರವಾರ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ.