
ಮುಂಬೈ, ಮೇ 21: ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡ ಬುಧವಾರ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ.
ಈ ನಿಟ್ಟಿನಲ್ಲಿ ಬಿಸಿಸಿಐನ ಪ್ರಧಾನ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಕೋಚ್ ರವಿ ಶಾಸ್ತ್ರಿ, ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಮಾಜಿ ನಾಯಕ ಹಾಗೂ ವಿಕೆಟ್‌ಕೀಪರ್ ಎಂ.ಎಸ್ ಧೋನಿ ಬಹುದೊಡ್ಡ ಪಾತ್ರ ನಿಭಾಯಿಸಲಿದ್ದಾರೆ ಎಂದು ಹೇಳಿದ್ದಾರೆ.
ಧೋನಿ ಕುರಿತಾಗಿಯೂ ಕೋಚ್ ಶಾಸ್ತ್ರಿ ಗುಣಗಾನ ಮಾಡಿದ್ದಾರೆ. "ಧೋನಿಗೆ ಏನನ್ನೂ ಹೇಳುವ ಅಗತ್ಯವಿಲ್ಲ. ಏನು ಮಾಡಬೇಕೋ ಅದನ್ನು ಅವರು ಮಾಡುತ್ತಾರೆ. ವಿರಾಟ್ ಜೊತೆಗೆ ಧೋನಿ ಉತ್ತಮ ಸಂವಹನ ಹೊಂದಿದ್ದಾರೆ. ವಿಕೆಟ್‌ಕೀಪಿಂಗ್ ವಿಚಾರದಲ್ಲಿ ಅವರನ್ನು ಮೀರಿಸುವವರು ಬೇರೆ ಯಾರೂ ಇಲ್ಲ. ಇನ್ನು ಐಪಿಎಲ್‌ನಲ್ಲಿ ಅವರ ಆಟ ಗಮನಿಸಿದರೆ ಅದ್ಭುತ ಲಯ ಕಂಡುಕೊಂಡಿದ್ದಾರೆ ಎಂಬುದು ತಿಳಿಯುತ್ತದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಧೋನಿ ನಮ್ಮ ತಂಡ ಬಹುದೊಡ್ಡ ಆಟಗಾರ,'' ಎಂದಿದ್ದಾರೆ.
2011ರಲ್ಲಿ ತಮ್ಮ ನಾಯಕತ್ವದಲ್ಲಿ ಭಾರತ ತಂಡಕ್ಕೆ ಏಕದಿನ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟ ಎಂ.ಎಸ್ ಧೋನಿ, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದು ಇದು ನಾಲ್ಕನೇ ಬಾರಿ ಬಾಗಿದೆ. ಇದಕ್ಕೆ ಭರ್ಜರಿಯ ಸಿದ್ದತೆ ನಡೆಸಿರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನುಭವಿ ವಿಕೆಟ್‌ಕೀಪರ್, ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 83.2ರ ಸರಾಸರಿಯಲ್ಲಿ 416 ರನ್‌ಗಳನ್ನು ಚಚ್ಚಿದ್ದರು.
"ಐಪಿಎಲ್‌ನಲ್ಲಿ ಅವರ ಆಟ ಕಂಡು ನಿಜಕ್ಕೂ ಸಂತಸವಾಯಿತು. ಅದರಲ್ಲೂ ಅವರ ಬ್ಯಾಟಿಂಗ್, ಫುಟ್‌ವರ್ಕ್ ಮತ್ತು ಬಲಿಷ್ಠ ಹೊಡೆತಗಳನ್ನು ಎಲ್ಲವೂ ಅದ್ಭುತ. ಹೀಗಾಗಿ ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡ ಬಹುದೊಡ್ಡ ಆಟಗಾರ ಅವರು,'' ಎಂದು ಹೇಳಿದ್ದಾರೆ.
ಇನ್ನು ವಿಶ್ವಕಪ್‌ನ ನೂತನ ಮಾದರಿ ಮತ್ತು ಎದುರಾಗಬಹುದಾದ ಕಠಿಣ ಸ್ಪರ್ಧೆ ಕುರಿತಾಗಿ ಮಾತನಾಡಿದ ಶಾಸ್ತ್ರಿ, "ಈ ಬಾರಿ ಕಠಿಣ ಸವಾಲು ಎದುರಾಗಲಿದೆ. 2015 ಮತ್ತು 2019ಕ್ಕೆ ಹೋಲಿಸಿ ನೋಡಿದರೆ, ತಂಡಗಳ ಸಾಮರ್ಥ್ಯ ನಡುವಿನ ಅಂತರ ಕಡಿಮೆಯಾಗಿದೆ. 2015ರ ವಿಶ್ವಕಪ್‌ಗೆ ಹೋಲಿಸಿದರೆ ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ತಂಡಗಳು ಇನ್ನಷ್ಟು ಬಲಿಷ್ಠ ತಂಡಗಳಾಗಿ ಹೊರಹೊಮ್ಮಿವೆ. ವೆಸ್ಟ್ ಇಂಡೀಸ್ ತಂಡವನ್ನು ಕಡೆಗಣಿಸುಂತಿಲ್ಲ,'' ಎಂದು ಶಸ್ತ್ರಿ ಹೇಳಿದ್ದಾರೆ.
"ಈ ತಂಡ ಕಳೆದ 5 ವರ್ಷಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡುವ ತುಡಿತ ತಂಡದಲ್ಲಿದೆ. ವಿಶ್ವಕಪ್‌ನಲ್ಲೂ ಇದೇ ಆಟ ಮುಂದುವರಿಸಲಿದೆ. ತನ್ನ ನೈಜ ಆಟ ಪ್ರದರ್ಶಿಸಿದರೆ ಈ ಬಾರಿ ಪ್ರಶಸ್ತಿ ಗೆದ್ದು ಮನೆಗೆ ತರಬಹುದು,'' ಎಂದು ಶಾಸ್ತ್ರಿ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
ವಿಶ್ವಕಪ್‌ಗೂ ಪ್ಲೇ ಆಫ್ಸ್ ಅಗತ್ಯವಿದೆ
ಇದೇ ವೇಳೆ ವಿಶ್ವಕಪ್ ಟೂರ್ನಿಯಲ್ಲೂ ಐಪಿಎಲ್‌ನಲ್ಲಿರುವ ಪ್ಲೇ ಆಫ್ಸ್ ಮಾದರಿ ಪರಿಚಯಿಸಬೇಕು ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ. "ನಾನು ಮೊದಲಿನಿಂದಲೂ ಹೇಳಿದ್ದೇನೆ. ಐಪಿಎಲ್ ಟೂರ್ನಿಯ ವಿಧಾನ ಅದ್ಭುತವಾಗಿದೆ. ಭವಿಷ್ಯದಲ್ಲಿ ಐಸಿಸಿ ಕೂಡ ಐಪಿಎಲ್ ಮಾದರಿಯಲ್ಲಿ ಪ್ಲೇಆಪ್ಸ್ ಪಂದ್ಯಗಳನ್ನು ವಿಶ್ವಕಪ್‌ನಲ್ಲಿ ಪರಿಚಯಿಸಬಹುದು ಎಂಬ ಸಂಗತಿಯನ್ನು ಅಲ್ಲಗಳಿಯುವಂತಿಲ್ಲ. ಇದು ಕಂಡಿತಾ ಸಾಧ್ಯ. ಆದರೆ, ಸದ್ಯಕ್ಕೆ ಈ ಅದೃಷ್ಟ ಇಲ್ಲವಾಗಿದೆ,'' ಎಂದು ಹೇಳಿದ್ದಾರೆ.
ದಕ್ಷಿಣ ಆಪ್ರಿಕಾ ವಿರುದ್ಧ ಮೊದಲ ಪಂದ್ಯ
ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ 12ನೇ ಆವೃತ್ತಿಯಲ್ಲಿ ಭಾರತ ತಂಡ ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ವಿಜಯ್ ಶಂಕರ್, ಕೇದಾರ್ ಜಾಧವ್, ಎಂ.ಎಸ್ ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ.