
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂದೆ ಸೇನೆಯೊಂದಿಗೆ ಧೋನಿ ಹೆಚ್ಚಿನ ಸಮಯ ವ್ಯಯಿಸಲಿದ್ದಾರೆ ಎಂದು ಧೋನಿ ಗೆಳೆಯ ಮತ್ತು ವ್ಯವಹಾರ ಪಾಲುದಾರ ಅರುಣ್ ಪಾಂಡೆ ತಿಳಿಸಿದ್ದಾರೆ. ನಿವೃತ್ತಿ ನಿರ್ಧಾರದಿಂದ ಬ್ರಾಂಡ್ ಮೌಲ್ಯ ಕಡಿಮೆಯಾಗಲಿದೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ.
ಧೋನಿ ರಾಜೀನಾಮೆಯ ಬಗ್ಗೆ ನಿಖರವಾಗ ಗೊತ್ತಿರಲಿಲ್ಲ. ಆದರೆ ಸದ್ಯದಲ್ಲೇ ನಿವೃತ್ತಿ ಹೇಳಲಿದ್ದಾರೆ ಎಂದು ತಿಳಿದಿತ್ತು. ಅದು ಅವರ ಸ್ವತಂತ್ರ ನಿರ್ಧಾರವಾಗಿದೆ. ಸದ್ಯ ಅವರು ಐಪಿಎಲ್‌ಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ ಎಂದು ಅರುಣ್ ಪಾಂಡೆ ಧೋನಿ ನಿರ್ಧಾರದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಸೇನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಗೌರವ ಹೊಂದಿದ್ದಾರೆ. ಕಳೆದ ವಿಶ್ವಕಪ್‌ನಿಂದ ಭಾರತ ಸೆಮಿ ಫೈನಲ್‌ನಿಂದ ಹೊರಬಿದ್ದ ಬಳಿಕ ತಿಂಗಳುಗಳ ಕಾಲ ಮಾಹಿ ಸೇನೆಯ ಪ್ಯಾರಚೂಟ್ ರಿಜಿಮೆಂಟ್‌ನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದರು.
ಎಂಎಸ್ ಧೋನಿ ಸೇನೆಯೊಂದಿಗೆ ಹೆಚ್ಚಿನ ಸಮಯ ಕಳೆಯುವುದು ಬಹುತೇಕ ಖಚಿತವಾಗಿದೆ. ಕಮರ್ಷಿಯಲ್ ವ್ಯವಹಾರ ಮತ್ತಿತರ ಬದ್ಧತೆಗಳಿಗೆ ಸಮಯ ನೀಡಲಿದ್ದಾರೆ. ಸದ್ಯದಲ್ಲಿಯೇ ಕುಳಿತು ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದು ಅರುಣ್ ಪಾಂಡೆ ಮಾಹಿತಿ ನೀಡಿದರು.
ಧೋನಿಯ ಬ್ರ್ಯಾಂಡ್ ಮೌಲ್ಯ ನಿವೃತ್ತಿಯ ನಂತರ ಕಡಿಮೆಯಾಗುವುದಿಲ್ಲ ಎಂಬುದನ್ನು ಅರುಣ್ ಪಾಂಡೆ ಹೇಳಿದ್ದಾರೆ. ಇದಕ್ಕೆ ಕಳೆದ ವರ್ಷ ಧೋನಿ 10 ಹೊಸ ಬ್ರ್ಯಾಂಡ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಅದು ಸುದೀರ್ಘ ಕಾಲದ ಒಪ್ಪಂದಗಳಾಗಿದೆ ಎಂದು ಅರುಣ್ ಪಾಂಡೆ ಹೇಳಿಕೊಂಡಿದ್ದಾರೆ. ಜೊತೆಗೆ ಮುಂದಿನ ಎರಡು ಅಥವಾ ಮೂರು ಐಪಿಎಲ್‌ನಲ್ಲಿ ಧೋನಿ ಪಾಳ್ಗೊಳ್ಳಲಿದ್ದಾರೆ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ.