18ನೇ ಆವೃತ್ತಿಯ ಐಪಿಎಲ್ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಉಳಿದ್ರೂ ಸಹ ಇನ್ನು ಮೊದಲೆರೆಡು ಸ್ಥಾನ ಯಾರಾ ಪಾಲಾಗಲಿದೆ ಎಂಬ ಪ್ರಶ್ನೆ ಇನ್ನು ಕಂಗಂಟಾಗಿಯೇ ಉಳಿದಿದೆ. ಗುಜರಾತ್ ಟೈಟಾನ್ಸ್, ಸಿಎಸ್‌ಕೆ ವಿರುದ್ಧದ ಸೋಲು ಕಾಣುತ್ತಿದ್ದಂತೆ ಮೊದಲೆರೆಡು ಸ್ಥಾನಕ್ಕಾಗಿ ಹೋರಾಟ ರೋಚಕತೆ ಹುಟ್ಟಿಸಿದೆ. ಸೋಮವಾರ ಜೈಪುರ್‌ದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಲು ಪ್ಲ್ಯಾನ್ ಮಾಡಿಕೊಂಡಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಭಯ ತಂಡಗಳು ಬಲಾಢ್ಯವಾಗಿವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಚಾಂಪಿಯನ್ ಆದ ವಿಶ್ವಾಸವಿದ್ದರೆ, ಪಂಜಾಬ್ ತಂಡಕ್ಕೆ ಭರ್ಜರಿ ಪ್ರದರ್ಶನ ನೀಡುತ್ತಿರುವ ಆತ್ವವಿಶ್ವಾಸವಿದೆ. ಪಂಜಾಬ್ ಆಡಿದ 13 ಪಂದ್ಯಗಳಲ್ಲಿ 17 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ 16 ಅಂಕವನ್ನು ಕಲೆ ಹಾಕಿದ್ದು ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಪೂರ್ಣ ಎರಡು ಅಂಕವನ್ನು ಕಲೆ ಹಾಕಲು ಪಂಜಾಬ್ ಯೋಜನೆ ರೂಪಸಿಕೊಂಡಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದರೆ, ಕಿಂಗ್ಸ್ 19 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯುತ್ತದೆ. ಇನ್ನು ಮುಂಬೈ ಸಹ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ 18 ಅಂಕವಗುತ್ತದೆ. ಅಲ್ಲದೆ ರನ್ ರೇಟ್ ಅಮೋಘವಾಗಿದ್ದರಿಂದ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆಯಲಿದೆ.
ಮುಂಬೈ ಇಂಡಿಯನ್ಸ್ ತಂಡದ ಆರಂಭಿಕರಾದ ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ ಭರವಸೆ ಮೂಡಿಸಿದ್ದಾರೆ. ಇವರು ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಮಾಡುವ ಅವಶ್ಯಕತೆ ಇದೆ. ತಿಲಕ್ ವರ್ಮಾ, ನಮನ್ ಧಿರ್ ತಂಡಕ್ಕೆ ಅಗತ್ಯ ಕಾಣಿಕೆ ನೀಡಬೇಕಿದೆ. ಇನ್ನು ಆಲ್‌ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕು.

ಬೌಲಿಂಗ್‌ನಲ್ಲಿ ಟ್ರೆಂಟ್ ಬೌಲ್ಟ್, ದೀಪಕ್ ಚಹಾರ್ ಹೊಸ ಚೆಂಡಿನ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಮಧ್ಯದ ಓವರ್‌ಗಳಲ್ಲಿ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್ ವಿಕೆಟ್ ಬೇಟೆ ನಡೆಸಿ, ರನ್‌ಗಳಿಗೆ ಕಡಿವಾಣ ಹಾಕಬಲ್ಲರು.
ಪಂಜಾಬ್ ಕಿಂಗ್ಸ್ ತಂಡಕ್ಕೆ ಯುವ ಆಟಗಾರರೇ ಶಕ್ತಿ. ಆರಂಭಿಕರಾದ ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ತಂಡಕ್ಕೆ ಉತ್ತಮ ಕಾಣಿಕೆ ನೀಡಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ಜೋಶ್ ಇಂಗ್ಲಿಷ್, ನೇಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್ ತಂಡ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸೆನ್, ಪ್ರವೀಣ್ ದುಬೆ ಬಿಗುವಿನ ದಾಳಿ ನಡೆಸಿ ಮುಂಬೈ ಬೌಲರ್‌ಗಳಿಗೆ ಕಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಕನಸು ನನಸಾಗುತ್ತದೆ. ಸ್ಪಿನ್ ಮಾಂತ್ರಿಕ ಯುಜುವೇಂದ್ರ ಚಹಾಲ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ತಲೆನೋವಾಗಿದೆ.