ಯುಎಇ ಐಪಿಎಲ್‌ನ ಇತಿಹಾಸ : ಮುಂಬೈ ಇಂಡಿಯನ್ಸ್ ತಂಡದ ಕರಾಳ ನೆನಪು

ಈ ಬಾರಿಯ ಐಪಿಎಲ್ ಯುಎಇನಲ್ಲಿ ನಡೆಸುವ ತೀರ್ಮಾನವನ್ನು ನಡೆಸಲಾಗಿದ್ದು ಎಲ್ಲಾ ತಂಡಗಳು ಅಂತಿಮ ಹಂತದ ಸಿದ್ದತೆಗಳನ್ನು ನಡೆಸುತ್ತಿದೆ. ವಿದೇಶದಲ್ಲಿ ಸಂಪೂರ್ಣವಾಗಿ ನಡೆಯುತ್ತಿರುವ ಎರಡನೇ ಐಪಿಎಲ್ ಇದಾಗಿದ್ದು ಈ ಹಿಂದೆ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಐಪಿಎಲ್ ಭಾರತದಾಚೆಗೆ ಆಯೋಜನೆ ಮಾಡಲಾಗಿತ್ತು.
ಅದಾದ ಬಳಿಕ 2014ರಲ್ಲಿ ಲೋಕಸಭಾ ಚುನಾವಣೆ ಬಂದಾಗಲೂ ಮೊದಲ ಹಂತದ ಐಪಿಎಲ್ ಪಂದ್ಯಾವಳಿಯನ್ನು ಯುಎಇನಲ್ಲಿ ನಡೆಸಲಾಗಿತ್ತು. ಆರಂಭಿಕ 20 ಪಂದ್ಯಗಳು ಯುಎಇನಲ್ಲಿ ನಡೆದಿತ್ತು. ಆದರೆ ಈ ಟೂರ್ನಿಯಲ್ಲಿ ಸದ್ಯ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವೆನಿಸಿರುವ ಮುಂಬೈ ಅತ್ಯಂತ ಕರಾಳ ನೆನಪನ್ನು ಹೊಂದಿದೆ.
ಮುಂಬೈ ತಂಡದ ಕರಾಳ ನೆನಪು ಯಾವುದು? ಇತಿಹಾಸದ ಕೆಟ್ಟ ನೆನಪನ್ನು ಅಳಿಸಿ ಹಾಕುವ ಪ್ರದರ್ಶನ ನೀಡುತ್ತಾ ಮುಂಬೈ ಇಂಡಿಯನ್ಸ್? ಸಂಪೂರ್ಣ ಮಾಹಿತಿಗೆ ಮುಂದೆ ಓದಿ..

20 ಪಂದ್ಯಗಳಿಗೆ ಯುಎಇ ಆತಿಥ್ಯ
ಏಳನೇ ಆವೃತ್ತಿಯಲ್ಲಿ ಯುಎಇ ಮೊದಲ ಬಾರಿಗೆ ಐಪಿಎಲ್ ಟೂರ್ನಿಗೆ ಆತಿಥ್ಯವನ್ನು ನೀಡಿತ್ತು. ಮೊದಲ ಹಂತದ 20 ಪಂದ್ಯಗಳಲ್ಲಿ ಶಾರ್ಜಾ, ದುಬೈ ಹಾಗೂ ಅಬುದಾಬಿ ಕ್ರೀಡಾಂಗಣಗಳಲ್ಲಿ ಆಯೋಜನೆ ಮಾಡಲಾಗಿತ್ತು. ಪ್ರತಿ ತಂಡವೂ ಇಲ್ಲಿ ತಲಾ ಐದು ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.

ಮುಂಬೈ ಇಂಡಿಯನ್ಸ್ ಪಾಲಿಗೆ ಕರಾಳ ನೆನಪು
ಈ ಬಾರಿಯ ಐಪಿಎಲ್ ಯುಎಇಗೆ ಶಿಫ್ಟ್ ಆಗುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳು ಆತಂಕಕ್ಕೆ ಒಳಗಾದರೆ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಯುಎಇನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್ ತೋರಿದ ಪ್ರದರ್ಶನ. ಒಂದೂ ಗೆಲುವು ಕಾಣದೆ ಮುಂಬೈ ಇಂಡಿಯನ್ಸ್ ನಿರಾಸೆಯಿಂದ ವಾಪಾಸಾಗಿತ್ತು.

ರೋಹಿತ್ ನಾಯಕತ್ವದಲ್ಲಿ ಭಾರೀ ಹಿನ್ನೆಡೆ
2012ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ರೋಹಿತ್ ಶರ್ಮಾ 2013ರಲ್ಲಿ ಚೊಚ್ಚಲ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೇ ಯಶಸ್ಸಿನ ನೆನಪಿನಲ್ಲೇ ಮುಂಬೈ ಇಂಡಿಯನ್ಸ್ ಯುಎಇಗೆ ಕಾಲಿಟ್ಟಿತ್ತು. ಆದರೆ ಯುಎಇನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಕನಿಷ್ಟ ಒಂದು ಗೆಲುವನ್ನು ಕಾಣಲೂ ಮುಂಬೈ ಇಂಡಿಯನ್ಸ್‌ಗೆ ಸಾಧ್ಯವಾಗಲೇ ಇಲ್ಲ. ಈ ನಿರಾಸೆಯೊಂದಿಗೆ ಭಾರತಕ್ಕೆ ಮರಳಿತ್ತು ರೋಹಿತ್ ಪಡೆ.

ಕೆಟ್ಟ ದಾಖಲೆ ಅಳಿಸಿ ಹಾಕುತ್ತಾ ಎಂಐ
ಹಾಲಿ ಚಾಂಪಿಯನ್ ಎನಿಸಿರುವ ಮುಂಬೈ ಇಂಡಿಯನ್ಸ್ ಯುಎಇನಲ್ಲಿರುವ ಈ ಕೆಟ್ಟ ದಾಖಲೆ ನಿಜಕ್ಕೂ ಕಹಿ ಅನುಭವ. ಹೀಗಾಗಿ ಈ ಕರಾಳ ನೆನಪನ್ನು ಅಳಿಸಿಹಾಕಲು ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. 2014ರ ಮುಂಬೈ ಇಂಡಿಯನ್ಸ್ ತಂಡಕ್ಕೂ ಈಗಿನ ತಂಡಕ್ಕೂ ಸಾಕಷ್ಟು ಬದಲಾವಣೆಯಿದೆ. ನಾಯಕ ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್ ಹಾಗೂ ನಾಯಕತ್ವ ಎರಡಲ್ಲೂ ಸಾಕಷ್ಟು ಅನುಭವ ಪಡೆದುಕೊಂಡಿದ್ದಾರೆ. ಈ ಅನುಭವ ಮುಂಬೈ ಇಂಡಿಯನ್ಸ್ ಪಾಲಿಗೆ ಖಂಡಿತಾ ವರದಾನವಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications