WPL 2025 Final: ಫೈನಲ್‌ನಲ್ಲಿ ಡೆಲ್ಲಿ ಡುಬ್ಕಿ: ಮುಂಬೈ ಇಂಡಿಯನ್ಸ್ ಇತಿಹಾಸ
ಭರವಸೆಯ ಆಟಗಾರ್ತಿ ನ್ಯಾಟ್ ಸ್ಕೀವರ್ ಬ್ರಂಟ್ (30 ರನ್ ಹಾಗೂ 3 ವಿಕೆಟ್) ಇವರ ಭರ್ಜರಿ ಆಲ್‌ರೌಂಡರ್ ಪ್ರದರ್ಶನ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಸೊಗಸಾದ ಪ್ರದರ್ಶನ ಫೈನಲ್‌ನಲ್ಲಿ ಮೂಡಿ ಬಂದ ಫಲವಾಗಿ ಮುಂಬೈ ಇಂಡಿಯನ್ಸ್ 8 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೂರನೇ ಬಾರಿಯೂ ನಿರಾಸೆ ಅನುಭವಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 149 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 141 ರನ್ ಸೇರಿಸಿ ಸೋಲು ಕಂಡಿತು. ಕೊನೆಯ ಓವರ್ ವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಡೆಲ್ಲಿ ಪರ ಕನ್ನಡತಿ ಹಾಗೂ ಅಂಡರ್ 19 ಟಿ20 ವಿಶ್ವಕಪ್ ವಿಜೇತ ತಂಡದ ನಾಯಕಿ ನಿಕ್ಕಿ ಪ್ರಸಾದ್ ಅವರು ಪ್ರಯತ್ನ ಪಟ್ಟರು. ಆದರೆ ಫಲ ಸಿಗಲಿಲ್ಲ. ಸಮಯಕ್ಕೆ ಸರಿಯಾಗಿ ವಿಕೆಟ್‌ಗಳನ್ನು ಪಡೆಯುತ್ತಾ ಸಾಗಿದ ಮುಂಬೈ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿತು.

ಕಳಪೆ ಆರಂಭ
ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಪರ ನಾಯಕಿ ಮೆಗ್ ಲ್ಯಾನಿಂಗ್ (13), ಶೆಫಾಲಿ ವರ್ಮಾ (4), ಜೆಸ್ ಜೊನಾಸ್ಸೆನ್ (13) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅನ್ನಾಬೆಲ್ ಸದರ್ಲ್ಯಾಂಡ್ (2) ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಹುಸಿಯಾಗಿಸಿದರು. ಪರಿಣಾಮ ಡೆಲ್ಲಿ 44 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಮಾರಿಜಾನ್ನೆ ಕಪ್ ಹಾಗೂ ಜೆಮಿಮಾ ರೋಡ್ರಿಗಸ್ ತಂಡದ ಪರ ಚಿಕ್ಕ ಜೊತೆಯಾಟದ ಕಾಣಿಕೆ ನೀಡಿದರು. ಜೆಮಿಮಾ 4 ಬೌಂಡರಿಗಳ ನೆರವಿನಿಂದ 30 ರನ್ ಸಿಡಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಸಾರಾ ಬ್ರೈಸ್ (5) ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. 7ನೇ ವಿಕೆಟ್‌ಗೆ ಮಾರಿಜಾನ್ನೆ ಕಪ್ ಮತ್ತು ನಿಕ್ಕಿ ಪ್ರಸಾದ್ ಜೋಡಿ 29 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡಕ್ಕೆ ಆಧರವಾದರು. ಮಾರಿಜಾನ್ನೆ ಕಪ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್ ಸಿಡಿಸಿದರು. ನಿಕ್ಕಿ ಅಜೇಯ 25 ರನ್ ಚಚ್ಚಿದರು.
ಫೈನಲ್ ಪಂದ್ಯದಲ್ಲಿ ನ್ಯಾಟ್ ಸ್ಕೀವರ್ ಬ್ರಂಟ್ 3, ಅಮೆಲಿಯಾ ಕೆರ್ 2 ವಿಕೆಟ್ ಪಡೆದು ಮಿಂಚಿದರು.
ಮೂರನೇ ವಿಕೆಟ್‌ಗೆ 89 ರನ್ ಜೊತೆಯಾಟ
ಮುಂಬೈ ಇಂಡಿಯನ್ಸ್ ತಂಡದ ಪರ ಹ್ಯಾಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ ಆರಂಭಿಕರಾಗಿ ಕಳಪೆ ಆರಂಭ ನೀಡಿದರು. ಮೂರನೇ ವಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ಹಾಗೂ ನ್ಯಾಟ್ ಸ್ಕೀವರ್ ಬ್ರಂಟ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 62 ಎಸೆತಗಳಲ್ಲಿ 89 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ನ್ಯಾಟ್ ಸ್ಕೀವರ್ ಬ್ರಂಟ್ 30 ರನ್ ಬಾರಿಸಿ ಔಟ್ ಆದರು. ನಾಯಕಿ ಹರ್ಮನ್ ಪ್ರೀತ್ ಕೌರ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 66 ರನ್ ಸಿಡಿಸಿ ತಂಡದ ಪರ ಮಿಂಚಿದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಮರಿಜಾನ್ನೆ ಕಪ್, ಜೆಸ್ ಜೊನಾಸೆನ್, ಶ್ರೀ ಚರಣಿ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications