MI vs PBKS: ಫೈನಲ್‌ಗೆ ಯಾರಾಗ್ತಾರೆ ಕ್ವಾಲಿಫೈ: ಇಂದು ಪಂಜಾಬ್, ಮುಂಬೈ ಹೈವೋಲ್ಟೇಜ್ ಫೈಟ್
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಇಂದು ಅಹಮದಾಬಾದ್‌ನಲ್ಲಿ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಪ್ರಶಸ್ತಿ ಸುತ್ತಿನ ಕಾದಾಟವನ್ನು ನಡೆಸಲಿದೆ. ಈ ವೇಳೆ ಯಾರು ಫೈನಲ್‌ಗೆ ಅರ್ಹತೆ ಪಡೆಯಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.
ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯದ ಚಿತ್ರಣವನ್ನೇ ಬುಡಮೇಲು ಮಾಡಬಲ್ಲರು. ಪಂಜಾಬ್ ಹಾಗೂ ಮುಂಬೈ ಒಟ್ಟಾರೆ ಐಪಿಎಲ್‌ನಲ್ಲಿ 32 ಬಾರಿ ಮುಖಾಮುಖಿ ಆಗಿವೆ. ಈ ವೇಳೆ ಮುಂಬೈ 17 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ 15ರಲ್ಲಿ ಜಯ ಸಾಧಿಸಿದೆ. ಈ ಅಂಕಿ ಅಂಶಗಳು ಏನೇ ಕಥೆ ಹೇಳ್ತಾ ಇರಬಹುದು. ಆದರೆ ಪ್ರಸಕ್ತ ಸಾಲಿನ ಫಾರ್ಮ್ ಪಂಜಾಬ್ ತಂಡದ್ದು ಅಮೋಘವಾಗಿದೆ. ಪಂಜಾಬ್ ಚೊಚ್ಚಲ ಕಪ್ ಗೆಲ್ಲುವ ಕನಸಿನಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ ಆರನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಪ್ಲ್ಯಾನ್ ಮಾಡಿಕೊಂಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಈಗಾಗಲೇ 42 ಪಂದ್ಯಗಳಿಗೆ ಆತಿಥ್ಯವನ್ನು ನೀಡಿದೆ. ಈ ವೇಳೆ ಮೊದಲು ಹಾಗೂ ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡಗಳು ತಲಾ 21 ಬಾರಿ ಗೆದ್ದಿವೆ. ಈ ಮೈದಾನದಲ್ಲಿ 243 ರನ್ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಈ ಅಂಗಳದಲ್ಲಿ 204 ರನ್‌ಗಳನ್ನು ಚೇಸ್ ಮಾಡಲಾಗಿದೆ. ಈ ಆವೃತ್ತಿಯಲ್ಲಿ ಈಗಾಗಲೇ ಈ ಮೈದಾನದಲ್ಲಿ 7 ಪಂದ್ಯಗಳು ನಡೆದಿದ್ದು, ಬ್ಯಾಟಿಂಗ್ ಮೊದಲ ಬಾರಿಗೆ ತಂಡ 6 ಪಂದ್ಯಗಳನ್ನು ಗೆದ್ದಿದೆ. ಇನ್ನು ಭಾನುವಾರದ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್ ಸಿಗುವ ಸಾಧ್ಯತೆ ಇದೆ.
ಸ್ಟಾರ್ ಆಟಗಾರರ ಆಕರ್ಷಣೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ರೋಹಿತ್ ಶರ್ಮಾ, ಜಾನಿ ಬೇರ್‌ಸ್ಟೋ ಇನಿಂಗ್ಸ್ ಆರಂಭಿಸಲಿದ್ದು, ದೊಡ್ಡ ಮೊತ್ತಕ್ಕೆ ಈ ಜೋಡ ಭದ್ರ ಅಡಿಪಾಯ ಹಾಕಿಕೊಡಬೇಕು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ತಮ್ಮ ಘನತೆಗೆ ತಕ್ಕ ಆಟವನ್ನು ಆಡಬೇಕಿದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಇನ್ನು ಮುಂಬೈ ತಂಡದಲ್ಲಿ ಸ್ಟಾರ್ ಬೌಲರ್‌ಗಳು ಇದ್ದಾರೆ. ಇವರು ಎದುರಾಳಿ ಬ್ಯಾಟರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡಬಹುದು. ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್ ವೇಗದ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇನ್ನು ಮಿಚೆಲ್ ಸ್ಯಾಂಟ್ನರ್ ಎಂದಿನಂತೆ ಸ್ಪಿನ್ ಜಾದು ನಡೆಸಬೇಕಿದೆ. ಅಂದಾಗ ಫೈನಲ್‌ಗೆ ಅರ್ಹತೆ ಪಡೆಯುವ ಕನಸು ನನಸಾಗುತ್ತದೆ.
ಸಂಭಾವ್ಯ ಮುಂಬೈ ತಂಡ: ರೋಹಿತ್ ಶರ್ಮಾ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ರಿಚರ್ಡ್ ಗ್ಲೀಸನ್/ರೀಸ್ ಟಾಪ್ಲೆ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್
ಯುವಕರೇ ಬಲ
ಪಂಜಾಬ್ ಕಿಂಗ್ಸ್ ತಂಡಕ್ಕೆ ಯುವಕರೇ ಬಲವಾಗಿದ್ದಾರೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ ಜೋಡಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೋಶ್ ಇಂಗ್ಲಿಸ್, ನಾಯಕ ಶ್ರೇಯಸ್ ಅಯ್ಯರ್, ನೆಹಲ್ ವಧೇರಾ, ಶಶಾಂಕ್ ಸಿಂಗ್ ಮಹತ್ವದ ಪಂದ್ಯದಲ್ಲಿ ಇಂಪ್ಯಾಕ್ಟ್ ಮಾಡಬೇಕಿದೆ. ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್, ಕೈಲ್ ಜೇಮಿಸನ್, ವಿಜಯ್ ಕುಮಾರ್ ವೈಶಾಖ್, ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಡಬೇಕಿದೆ. ಇನ್ನು ಗಾಯದ ಕಾರಣದಿಂದ ಮೈದಾನದಿಂದ ದೂರ ಉಳಿದಿದ್ದ ಯುಜುವೇಂದ್ರ ಚಹಾಲ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ.

ಸಂಭಾವ್ಯ ಪಂಜಾಬ್ ತಂಡ: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ನೆಹಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೈಮಿಸನ್, ಯುಜುವೇಂದ್ರ ಚಾಹಲ್, ವಿಜಯಕುಮಾರ್ ವೈಶಾಖ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications