ವಿಶ್ವದ ಅಪಾಯಕಾರಿ ಬೌಲರ್‌ಗಳ ಪಟ್ಟಿಯನ್ನು ಒಮ್ಮೆ ಕಣ್ಣಾಡಿಸಿದರೆ ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಟೀಮ್ ಇಂಡಿಯಾದ ಜಸ್ಪ್ರಿತ್ ಬುಮ್ರಾ. ಇವರನ್ನು ಅಭಿಮಾನಿಗಳು ಯಾರ್ಕರ್ ಸ್ಪೇಷಲಿಸ್ಟ್ ಎಂದೇ ಕರೆಯುತ್ತಾರೆ. ಈ ಪ್ಲೇಯರ್ ಯಾವುದೇ ಫಾರ್ಮೆಟ್‌ನಲ್ಲಾದರೂ ಮಿಂಚು ಹರಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿದ್ದ ಮುಂಬೈ ಇಂಡಿಯನ್ಸ್ ಇವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದೆ.
ಮಂಬೈ ಇಂಡಿಯನ್ಸ್ ಇವರನ್ನು ತಂಡಕ್ಕೆ ಸೇರಿಸಿಕೊಂಡ ಬಳಿಕ ಇವರ ಪ್ರದರ್ಶನ ಸೊಗಸಾಗಿದೆ. ಅಲ್ಲದೆ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಪರಿಣಾಮವೇ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿದೆ. ಟೀಮ್ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಸ್ಥಾನದ ವರೆಗೂ ಬುಮ್ರಾ ಅವರನ್ನು ತಂದು ನಿಲ್ಲಿಸಿದೆ. ಬುಮ್ರಾ ಅವರನ್ನು ಮುಂಬೈ ಇಂಡಿಯನ್ಸ್ ಕೈ ಬಿಡಲು ಇಚ್ಛಿಸಿತ್ತು ಎಂಬ ಸುದ್ದಿ ಹೊರ ಬಂದಿದೆ. ಅಂದಹಾಗೆ ಅದು ಈಗಲ್ಲಾ ಆರಂಭದಲ್ಲಿ. ಆದರೆ ಮುಂಬೈ ಇಂಡಿಯನ್ಸ್ ನಾಯಕ ಬುಮ್ರಾ ಅವರ ಮೇಲೆ ಇಟ್ಟ ನಂಬಿಕೆಯಿಂದಾಗಿ ಬುಮ್ರಾಗೆ ಮತ್ತಷ್ಟು ಆಡಲು ಅವಕಾಶ ಸಿಕ್ಕಿತು ಮತ್ತು ಬುಮ್ರಾ ನಂಬಿಕೆಗೆ ತಕ್ಕಂತೆ ಬದುಕಿದರು.

ಮಾಧ್ಯಮ ವರದಿಗಳ ಪ್ರಕಾರ, ಪಾರ್ಥಿವ್ ಪಟೇಲ್ ಜಿಯೋ ಸಿನಿಮಾದಲ್ಲಿ ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. 2015 ರಲ್ಲಿ ಬುಮ್ರಾ ಅವರ ಪ್ರದರ್ಶನವನ್ನು ತಂಡದ ಮ್ಯಾನೇಜ್ಮೆಂಟ್‌ಗೆ ತೃಪ್ತಿ ನೀಡಲಿಲ್ಲ ಎಂದು ಅವರು ಹೇಳಿದರು. ಆ ಸಮಯದಲ್ಲಿ ಅವರು ಯುವ ಪೇಸರ್. ಟೀಮ್ ಮ್ಯಾನೇಜ್‌ಮೆಂಟ್ ಬುಮ್ರಾರನ್ನು ಕೈ ಬಿಡಲು ಚಿಂತನೆ ನಡೆಸಿತ್ತು.
ಆಗ ರೋಹಿತ್ ಬುಮ್ರಾ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಬುಮ್ರಾ ಮುಂದಿನ ಋತುವಿನಲ್ಲಿ ಆಡುವ ಅವಕಾಶ ಪಡೆದರು. ಅಷ್ಟೇ ಅಲ್ಲ, ಋತುವಿನ ಮಧ್ಯದಲ್ಲಿ ಬುಮ್ರಾ ಅವರನ್ನು ತೆಗೆದುಹಾಕಲು ತಂಡವು ಮುಂದಾಗಿತ್ತು. ಆದರೆ ರೋಹಿತ್ ಸಮರ್ಥಿಸಿಕೊಂಡರು. ಆದರೆ, ಈ ಬಗ್ಗೆ ರೋಹಿತ್ ಅಥವಾ ಬುಮ್ರಾ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಬುಮ್ರಾ ಐಪಿಎಲ್ 2013 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಅವರು 3 ವಿಕೆಟ್ ಪಡೆದರು. ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್ ಮತ್ತು ಕರುಣ್ ನಾಯರ್ ಅವರನ್ನು ಬುಮ್ರಾ ಔಟ್ ಮಾಡಿದ್ದರು. 2013ರಲ್ಲಿ ಬುಮ್ರಾ ಕೇವಲ 2 ಪಂದ್ಯಗಳನ್ನು ಆಡಿದ್ದರು.
2014ರಲ್ಲಿ 11 ಪಂದ್ಯಗಳನ್ನು ಆಡಿದ್ದರು. ಈ ಋತುವಿನಲ್ಲಿ ಬುಮ್ರಾ 5 ವಿಕೆಟ್ ಪಡೆದಿದ್ದರು. ಇದಾದ ಬಳಿಕ 2015ರಲ್ಲಿ ಕೇವಲ 4 ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ ಋತುವಿನಲ್ಲಿ ಬುಮ್ರಾ 3 ವಿಕೆಟ್ ಕಬಳಿಸಿದ್ದರು. ಆದರೆ ಇದಾದ ನಂತರ ಅವರ ಗ್ರಾಫ್ ಹೆಚ್ಚುತ್ತಲೇ ಇತ್ತು. ಬುಮ್ರಾ 2016ರಲ್ಲಿ 14 ಪಂದ್ಯಗಳನ್ನು ಆಡಿದ್ದು, 15 ವಿಕೆಟ್ ಪಡೆದಿದ್ದರು.

ಬುಮ್ರಾ ಐಪಿಎಲ್‌ನಲ್ಲಿ ಇದುವರೆಗೆ 120 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 145 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯವೊಂದರಲ್ಲಿ 10 ರನ್‌ಗಳಿಗೆ 5 ವಿಕೆಟ್ ಕಬಳಿಸಿರುವುದು ಬುಮ್ರಾ ಅವರ ಬೆಸ್ಟ್ ಸಾಧನೆ. ಅವರು 2022 ರಲ್ಲಿ 14 ಪಂದ್ಯಗಳನ್ನು ಆಡಿ 15 ವಿಕೆಟ್‌ಗಳನ್ನು ಪಡೆದಿದ್ದರು. 2021ರಲ್ಲಿ ಬುಮ್ರಾ 14 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದರು. ಆದರೆ 2020ರಲ್ಲಿ 27 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದರು.