ನಿಜಕ್ಕೂ ಮುಂಬೈ ಇಂಡಿಯನ್ಸ್ ತಂಡ ಈಗ ರಾಜಕೀಯ ಪಡಸಾಲೆಯಂತೆ ಭಾಸವಾಗುತ್ತಿದೆ. ರಾಜಕೀಯದಲ್ಲಿ ನಡೆಯುತ್ತಿರುವ ಹಲವು ಘಟನೆಗಳಿಗೆ ಈ ತಂಡ ಸಾಕ್ಷಿಆಗುತ್ತಿದೆ. ರಾಜಕೀಯ ಪಕ್ಷಗಳಲ್ಲಿನ ಭಿನ್ನಮತ ಮುಂಬೈ ಇಂಡಿಯನ್ಸ್ ತಂಡದಲ್ಲೂ ಕಾಣಿಸಿಕೊಳ್ಳುತ್ತಿದೆ.
ಸ್ವ ಪಕ್ಷದವರನ್ನೇ ಬಿಟ್ಟು ಬೇರೆ ಪಕ್ಷದವರನ್ನು ಪಕ್ಷಕ್ಕೆ ಕರೆತಂದು, ಅವರಿಗೆ ಚುಕ್ಕಾಣಿ ನೀಡಿದಾಗ ಹೇಗೆ ರಾಜಕೀಯ ಪಕ್ಷದ ಕಾರ್ಯಕತ್ರರಲ್ಲಿ ಅಸಮಾಧಾನ ಕಾಣಿಸಿಕೊಳ್ಳುತ್ತದೋ, ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮೂಲಕ ಕರೆತಂದು ಮುಂಬೈ, ತಂಡದ ಚುಕ್ಕಾಣಿಯನ್ನು ನೀಡಿದೆ. ಇದರಿಂದ ಮುಂಬೈ ತಂಡದಲ್ಲಿರುವ ಹಲವು ಆಟಗಾರರಲ್ಲಿ ಅಸಮಾಧಾನ ಮೂಡಿದೆ.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಎದ್ದಿರುವ ಅಸಮಾಧಾನಕ್ಕೆ ಕಾರಣವೇ ಹಾರ್ದಿಕ್ ಪಾಂಡ್ಯ ಅವರಿಗೆ ನೀಡಿರುವ ನಾಯಕತ್ವ.. ಗುಜರಾತ್ ಟೈಟನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ತನ್ನ ತಂಡಕ್ಕೆ ಸೇರಿಸಿಕೊಂಡಿತು. ಇದರಿಂದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ ಆಟಗಾರರಿಗೆ ನಿರಾಸೆ ಕಾದಿತ್ತು.
ಮುಂಬೈ ಇಂಡಿಯನ್ಸ್ ತಂಡದಲ್ಲೇ ಬಹು ವರ್ಷಗಳಿಂದ ಗುರುತಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮುನ್ನಡೆಸಿರುವ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದರು. ಈ ಇಬ್ಬರೂ ಆಟಗಾರರನ್ನು ಖಂಡಿತವಾಗಿಯೂ ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯ ರೂಪದಲ್ಲಿ ನೋಡಲಾಗುತ್ತಿತ್ತು. ಆದರೆ ಇತ್ತಿಚೀಗೆ ನಡೆದ ಹಠಾತ್ ಬೆಳವಣಿಗೆಯಲ್ಲಿ ಪಾಂಡ್ಯ ಮುಂಬೈ ತಂಡ ಸೇರಿದ್ದರಿಂದ, ಈ ಇಬ್ಬರೂ ಹಿರಿಯ ಆಟಗಾರರಿಗೆ ಅಸಮಾಧಾನವಾಗಿದೆ.

ಮುಂಬೈ ಇಂಡಿಯನ್ಸ್ ತಂಡದ ಚುಕ್ಕಾಣಿಯನ್ನು ಹಿಡಿಯುವ ಕನಸು ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಹೊಂದಿದ್ದರು. ಹಾರ್ದಿಕ್ ಪಾಂಡ್ಯ ಆಗಮನದಿಂದ ಬುಮ್ರಾ ಅವರ ಕನಸು ನುಚ್ಚುನೂರಾಗಿದೆ. ಒಂದೇ ತಂಡದ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ಕ್ಷಣಾರ್ಧದಲ್ಲಿ ಕೆಳಗೆ ಬಿದ್ದಿದೆ. ಹೀಗಾಗಿ ಬುಮ್ರಾ ಬೇರೆ ತಂಡಗಳತ್ತ ಮುಖ ಮಾಡುವ ಸಾಧ್ಯತೆ ಇದೆ.
ಆರ್‌ಸಿಬಿ ತಂಡಕ್ಕೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ಆಗಮನವಾದ್ರೆ, ಬೌಲಿಂಗ್ ವಿಭಾಗಕ್ಕೆ ಆನೆ ಬಲ ಬರಲಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಶಿಸ್ತು ಬದ್ಧ ದಾಳಿ ನಡೆಸಬಲ್ಲರು. ಅಲ್ಲದೆ ಯಾರ್ಕರ್‌ಗಳನ್ನು ನೀರು ಕುಡಿದಷ್ಟೇ ಸುಲಭವಾಗಿ ಹಾಕುವ ಕ್ಷಮತೆ ಹೊಂದಿದ್ದಾರೆ. ಬುಮ್ರಾ ಅವರು ಆರ್‌ಸಿಬಿ ತಂಡಕ್ಕೆ ಬಂದ್ರೆ ನಿಶ್ಚಿತವಾಗಿ ಬೇರೆ ತಂಡಗಳಿಗೆ ನಡುಕ ಗ್ಯಾರಂಟಿ.
ಇನ್ನು ಟ್ರೆಂಡಿಂಗ್‌ಗೆ ಬುಧವಾರ ಅವಕಾಶ ಇದ್ದು, ಈ ವೇಳೆ ಆರ್‌ಸಿಬಿ ಅವರನ್ನು ಸಂಪರ್ಕಿಸಿ ಮನವಲಿಸುವಲ್ಲಿ ಯಶಸ್ವಿಯಾದರೆ ಕಥೆ ಮುಗಿದೇ ಹೋಯಿತು. ನಿಶ್ಚಿತವಾಗಿ ಈ ಸಲ ಕಪ್ ನಮ್ದೆ..
ಟ್ರೇಡಿಂಗ್ ಎಂಬುದು ಫ್ರಾಂಚೈಸಿ ತಂಡಗಳ ನಡುವೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಆಟಗಾರನಿಗೆ ನಗದು ವಿನಿಮಯವನ್ನು ಮಾಡುವ ಹಕ್ಕು. ಯಾವುದೇ ತಂಡವು ಬಯಸಿದರೆ, ಅದು ತನ್ನ ಆಟಗಾರನನ್ನು ಮತ್ತೊಂದು ತಂಡದ ಆಟಗಾರನಿಗೆ ವ್ಯಾಪಾರದ ವಿಂಡೋದ ಅಡಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಈ ವೇಳೆ, ಎರಡೂ ತಂಡಗಳ ಒಪ್ಪಿಗೆಯನ್ನು ಹೊಂದಿರುವುದು ಅವಶ್ಯಕ.
ಆಟಗಾರರ ವಹಿವಾಟು ಒಂದು ತಂಡದಿಂದ ಇನ್ನೊಂದು ತಂಡಕ್ಕೆ ನಡೆದಾಗ, ಅವರು ಐಪಿಎಲ್ ಆಡಳಿತ ಕೌನ್ಸೆಲಿಂಗ್‌ನ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಟಗಾರನು ಮತ್ತೊಂದು ತಂಡಕ್ಕೆ ತೆರಳಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸದಿದ್ದರೆ, ಆ ಕ್ಷಣದಲ್ಲಿ ಒಪ್ಪಂದವನ್ನು ರದ್ದುಗೊಳಿಸಲಾಗುತ್ತದೆ.
ಸಾಮಾನ್ಯವಾಗಿ ಟ್ರೆಂಡಿಗ್ ಐಪಿಎಲ್ ಮುಗಿದ ಒಂದು ತಿಂಗಳ ನಂತರ, ಮತ್ತು ಹರಾಜು ನಡೆಯುವ ಹದಿನೈದು ದಿನಗಳ ಒಳಗೆ ನಡೆಯುತ್ತದೆ. ಅಲ್ಲದೆ ಹರಾಜು ಪ್ರಕ್ರಿಯೆ ಪೂರ್ಣಗೊಂಡ ನಂತರ, ಟ್ರೆಡ್ ಮಾಡಿಕೊಳ್ಳಲು ಅವಕಾಶವೂ ಇರುತ್ತದೆ.