ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು ಎಂಬುದು ಅದೆಷ್ಟೋ ಯುವ ಆಟಗಾರರ ಕನಸು. ಈ ನಿಟ್ಟಿನಲ್ಲಿ ಯುವಕರು ಹಗಲಿರುಳು ಶ್ರಮಿಸುತ್ತಾರೆ. ಸಿಕ್ಕ ಅವಕಾಶದಲ್ಲಿ ಅಬ್ಬರಿಸಿ ತಂಡಕ್ಕೆ ನೆರವಾಗುತ್ತಾರೆ. ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿ, ಬಿಸಿಸಿಐ ಆಯ್ಕೆ ಸಮಿತಿಯನ್ನು ತಮ್ಮತ್ತ ನೋಡುವಂತೆ ಮಾಡುತ್ತಾರೆ. ಈ ಸಾಲಿಗೆ ಸೇರಿರುವ ಪ್ರತಿಭೆ ಮುಂಬೈ ತಂಡದ ಮುಶೀರ್ ಖಾನ್..
ಮುಶೀರ್ ಖಾನ್ ಅವರ ಹೆಸರು ಕೇಳಿದ ತಕ್ಷಣ ಎಲ್ಲೋ ಕೆಳಿದ ನೆನಪು ನಿಮಗೆ ಆಗಬೇಕು. ಈಗಾಗಲೇ ಹಲವು ವಯೋಮಿತಿಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರ ಸಹೋದರ ಸರ್ಫರಾಜ್ ಖಾನ್ ಸಹ ಈಗಾಗಲೇ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು, ಮಿಂಚುತ್ತಿದ್ದಾರೆ. ತಮ್ಮ ಅಣ್ಣನ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಿದ್ದಾರೆ.

ಮುಶೀರ್ ಖಾನ್ ಅವರು ಒಬ್ಬ ನುರಿತ ಬ್ಯಾಟ್ಸ್‌ಮನ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಈ ವರ್ಷದ ಆರಂಭದಲ್ಲಿ ನಡೆದಿದ್ದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಮುಶೀರ್ ಅಬ್ಬರಿಸಿದ್ದರು. ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರು ಆಡಿದ ಏಳು ಪಂದ್ಯಗಳಲ್ಲಿ 60ರ ಸರಾಸರಿಯಲ್ಲಿ 360 ರನ್ ಸಿಡಿಸಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಿದ್ದರು. ಇವರ ಈ ಪ್ರದರ್ಶನದ ಬಲದಿಂದಲೇ ಅವರಿಗೆ ರಣಜಿ ತಂಡದಲ್ಲೂ ಸ್ಥಾನ ಲಭಿಸಿತು.
ರಣಜಿ ಟೂರ್ನಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಬ್ಯಾಟ್ ಮಾಡಿದ್ದ ಮುಶೀರ್ ಅಬ್ಬರಿಸಿದ್ದರು. ಆಡಿದ 3 ಪಂದ್ಯಗಳ 5 ಇನಿಂಗ್ಸ್‌ಗಳಲ್ಲಿ 433 ರನ್ ಸಿಡಿಸಿದ್ದರು. ಇದರಲ್ಲಿ 2 ಶತಕ ಹಾಗೂ 1 ಅರ್ಧಶತ ಸೇರಿವೆ. ಇವರ ಈ ಫರ್ಮಾ ಕಂಡು ಅವರಿಗೆ ದುಲೀಪ್ ಟ್ರೋಫಿಯಲ್ಲೂ ಆಡಲು ಅವಕಾಶ ನೀಡಲಾಯಿತು.

ಮುಶೀರ್ ಖಾನ್, ದುಲೀಪ್ ಟ್ರೋಫಿ 2024 ರಲ್ಲಿ ಭಾರತ ಬಿ ಪರ ಬ್ಯಾಟಿಂಗ್ ಮಾಡುವಾಗ, ಭಾರತ ಎ ವಿರುದ್ಧ 181 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರ ಈ ಇನಿಂಗ್ಸ್ ಕಂಡು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿರಾಸೆ ಕಾದಿತ್ತು. ಆದರೆ, ಇವರಿಗೆ ಭಾರತ ಎ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆ ಇದೆ.
ಭಾರತ ಎ ತಂಡ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಮುಶೀರ್ ಖಾನ್ ಅವರು ರೆಡ್ ಬಾಲ್ ಕ್ರಿಕೆಟ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಇದರ ಪ್ರತಿ ಫಲವಾಗಿ ಅವರಿಗೆ ಈ ಬಾರಿ ಭಾರತ ಎ ತಂಡದಲ್ಲಿ ಸ್ಥಾನ ಲಭಿಸುವ ಸಾಧ್ಯತೆ ಇದೆ.
ದುಲೀಪ್ ಟ್ರೋಫಿ 2024 ಮತ್ತು ಇರಾನಿ ಕಪ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ಭಾರತ ಎ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ದುಲೀಪ್ ಟ್ರೋಫಿ ನಂತರ ಮುಶೀರ್ ಇರಾನಿ ಕಪ್‌ನಲ್ಲಿಯೂ ಆಡಲಿದ್ದಾರೆ.