ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಪಂದ್ಯ ಮೀರ್‌ಪೂರ್‌ದಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಪರ ಸ್ಟಾರ್ ಬ್ಯಾಟರ್ ಒಬ್ಬರು ಇತಿಹಾಸದ ಪುಟಕ್ಕೆ ಕೆಲಸ ನೀಡಿದ್ದಾರೆ. ಹಾಗಿದ್ದರೆ ಆ ಬ್ಯಾಟರ್ ಯಾರು? ಅವರು ನಿರ್ಮಿಸಿದ ಇತಿಹಾಸ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ 106 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 308 ರನ್‌ಗಳಿಗೆ ಸರ್ವಪತನ ಕಂಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 101 ರನ್ ಸೇರಿಸಿತು. ಬಾಂಗ್ಲಾದೇಶ ಪರ ಮಹಮ್ಮದುಲ್ ಹಸನ್ ಜಾಯ್ ಅಜೇಯ 38, ಮುಶ್ಫಿಕರ್ ರಹೀಮ್ ಅಜೇಯ 31 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಸೋಮವಾರ ದಿನದಾಟವನ್ನು 6 ವಿಕೆಟ್‌ಗೆ 140 ರನ್‌ಗಳಿಂದ ಮುಂದುವರಿಸಿದ ದಕ್ಷಿಣ ಆಫ್ರಿಕಾ ಪರ ಕೈಲ್ ವೆರ್ರೆನ್ನೆ ಹಾಗೂ ವಿಯಾನ್ ಮುಲ್ಡರ್ ಜೊತೆಗೂಡಿ ಏಳನೆ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ವಿಯಾನ್ ಮುಲ್ಡರ್ 8 ಬೌಂಡರಿ ನೆರವಿನಿಂದ 54 ರನ್ ಬಾರಿಸಿ ಔಟ್ ಆದರು. ಕೆಳ ಕ್ರಮಾಂಕದಲ್ಲಿ ಡೇನ್ ಪಿಯೆಡ್ 32 ರನ್ ಸಿಡಿಸಿದರು.
ದಕ್ಷಿಣ ಆಫ್ರಿಕಾ ಪರ ಸ್ಟಾರ್ ಆಟಗಾರ ಕೈಲ್ ವೆರ್ರೆನ್ನೆ ಶತಕ ಬಾರಿಸಿ ಮಿಂಚಿದರು. ಇವರು 144 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 114 ರನ್ ಸಿಡಿಸಿ ಔಟ್ ಆದರು. ಬಾಂಗ್ಲಾ ಪರ ತೈಜುಲ್ ಇಸ್ಲಾಂ 5 ಹಾಗೂ ಹಸನ್ ಮಹಮೂದ್ 3 ವಿಕೆಟ್ ಪಡೆದು ಮಿಂಚಿದರು.
ಇನ್ನು ಎರಡನೇ ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾ ತಂಡದ ಆರಂಭ ಕಳಪೆಯಾಗಿತ್ತು. ಬಾಂಗ್ಲಾ ಪರ ಶಾದ್ಮನ್ ಇಸ್ಲಾಂ, ಮೊಮಿನುಲ್ ಹಕ್ ಜವಾಬ್ದಾರಿ ಮರೆತರು. ಮೂರನೇ ವಿಕೆಟ್‌ಗೆ ಮಹಮ್ಮದುಲ್ ಹಸನ್ ಜಾಯ್ ಹಾಗೂ ನಜ್ಮುಲ್ ಹೊಸೈನ್ ಶಾಂತೋ ಅರ್ಧಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ನಜ್ಮುಲ್ ಹೊಸೈನ್ ಶಾಂತೋ 23 ರನ್ ಬಾರಿಸಿ ಔಟ್ ಆದರು.
ದಿನದಾಟದ ಅಂತ್ಯಕ್ಕೆ ಸ್ವಲ್ಪ ಮೊದಲು ಕೇಶವ್ ಮಹಾರಾಜ್ ಎಸೆತದಲ್ಲಿ ಬೌಂಡರಿ ಬಾರಿಸಿದ ಮುಶ್ಫಿಕರ್ ರಹೀಮ್ ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದರು. ಈ ಸಾಧನೆ ಮಾಡಿದ ಮೊದಲ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಯನ್ನು ಇವರು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾ ಪರ ಟೆಸ್ಟ್‌ನಲ್ಲಿ ಗರಿಷ್ಠ ರನ್ ಸಾಧಿಸಿದ ಆಟಗಾರರ ಪಟ್ಟಿಯಲ್ಲಿ ತಮೀಮ್ ಇಕ್ಬಾಲ್ (5134 ರನ್), ಶಕೀಬ್ ಅಲ್ ಹಸನ್ (4609 ರನ್) ಕಾಣಿಸಿಕೊಳ್ಳುತ್ತಾರೆ.