ಟಿ20 ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಅಬ್ಬರ ಜೋರಾಗಿರುತ್ತದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಬ್ಯಾಟರ್‌ಗಳು ದಿನವೂ ಹೊಸ ಹೊಸ ದಾಖಲೆ ನಿರ್ಮಿಸುತ್ತಾರೆ. ಈ ಫಾರ್ಮೆಟ್‌ನಲ್ಲಿ ದಿನವೂ ದಾಖಲೆ ಪುಸ್ತಕಕ್ಕೆ ಕೆಲಸ. ಗುರುವಾರವೂ ನಮೀಬಿಯಾ ಬ್ಯಾಟರ್ ಒಬ್ಬರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಸದ್ದು ಮಾಡಿದ್ದಾರೆ. ಅಲ್ಲದೆ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ. ಹಾಗಿದ್ದರೆ ಅವರು ಬರೆದ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಸದ್ಯ ನಮೀಬಿಯಾ ಜಿಂಬಾಬ್ವೆ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಾಯಿತು. ಗುರುವಾರ ಈ ಸರಣಿಯ ಮೂರನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ನಮೀಬಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ನಮೀಬಿಯಾ ತಂಡದ ಆರಂಭಿಕರಾದ ಜಾನ್ ಫ್ರೈಲಿಂಕ್ ಹಾಗೂ ಲೌರೆನ್ ಸ್ಟೀನ್‌ಕ್ಯಾಂಪ್ ಅಮೋಘ ಪ್ರದರ್ಶನ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 74 ರನ್ ಸಿಡಿಸಿತು.

ಆರಂಭಿಕರಾದ ಜಾನ್ ಫ್ರೈಲಿಂಕ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ಇವರು ಜಸ್ಟ್ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ 13 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 31 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ 77 ರನ್ ಸಿಡಿಸಿ ಅಬ್ಬರಿಸಿದರು. ನಮೀಬಿಯಾ ಪರ ರೂಬೆನ್ ಟ್ರಂಪೆಲ್‌ಮನ್ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 46 ರನ್ ಸಿಡಿಸಿದರು. ಅಂತಿಮವಾಗಿ ನಮೀಬಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಸೇರಿಸಿತು.
2007 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಫ್ರೈಲಿಂಕ್ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರೆ, ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುವರಾಜ್ ಅವರನ್ನು ಹಿಂದಿಕ್ಕುತ್ತಿದ್ದರು.
ದೀಪೆಂದ್ರ ಸಿಂಗ್, ನೇಪಾಳ, ಮಂಗೋಲಿಯಾ ವಿರುದ್ಧ, 9 ಎಸೆತ
ಯುವರಾಜ್ ಸಿಂಗ್, ಭಾರತ, ಇಂಗ್ಲೆಂಡ್ ವಿರುದ್ಧ,12 ಎಸೆತ
ಮಿರ್ಜಾ ಅಹ್ಸನ್, ಆಸ್ಟ್ರಿಯಾ,ಲಕ್ಸೆಂಬರ್ಗ್ ವಿರುದ್ಧ, 13 ಎಸೆತ
ಮುಹಮ್ಮದ್ ಫಹಾದ್, ಟರ್ಕಿ, ಬಲ್ಗೇರಿಯಾ ವಿರುದ್ಧ, 13 ಎಸೆತ
ತಡಿವಾನಾಶೆ ಮರುಮಣಿ, ಜಿಂಬಾಬ್ವೆ, ಗ್ಯಾಂಬಿಯಾ ವಿರುದ್ಧ, 13 ಎಸೆತ
ಜಾನ್ ಫ್ರೈಲಿಂಕ್, ನಮೀಬಿಯಾ, ಜಿಂಬಾಬ್ವೆ ವಿರುದ್ಧ,13 ಎಸೆತ
ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರ ಸೀನ್ ವಿಲಿಯಮ್ಸ್ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 77 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು. ಅಂತಿಮವಾಗಿ ಜಿಂಬಾಬ್ವೆ 19.5 ಓವರ್‌ಗಳಲ್ಲಿ 176 ರನ್ ಆಲೌಟ್ ಆಯಿತು. ಮೊದಲ ಎರಡು ಪಂದ್ಯಗಳನ್ನು ಗೆದ್ದ ಜಿಂಬಾಬ್ವೆ ಸರಣಿಯನ್ನು ವಶಕ್ಕೆ ಪಡೆಯಿತು.