ವಡೋದರಾ: ಭರವಸೆಯ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ವಿರುದ್ಧ ಶತಕ ಬಾರಿಸಿ ಆರ್ಭಟಿಸಿದ್ದಾರೆ. ಇವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 16ನೇ ಪಂದ್ಯದಲ್ಲಿ 200 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ತಂಡಕ್ಕೆ ನೀಡಿದೆ. ಈ ಪಂದ್ಯದಲ್ಲಿ ನ್ಯಾಟ್ ಸಿವರ್-ಬ್ರಂಟ್ ಲೀಗ್‌ನಲ್ಲಿ ಮೊದಲ ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಸಜೀವನ್ ಸಜನಾ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಅನುಭವಿ ಆರಂಭಿಕ ಆಟಗಾರ್ತಿ ಹ್ಯಾಲಿ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸಿವರ್-ಬ್ರಂಟ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಸಿಬಿ ಬೌಲರ್‌ಗಳು ವಿಫಲರಾದರು. ಈ ಜೋಡಿ ಪವರ್ ಪ್ಲೇನಲ್ಲಿ ಅಬ್ಬರದ ಜೊತೆಯಾಟದ ಕಾಣಿಕೆ ನೀಡಿ ತಂಡ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಶ್ರಮಿಸಿತು

ಎರಡನೇ ವಿಕೆಟ್‌ಗೆ ಮ್ಯಾಥ್ಯೂಸ್ ಹಾಗೂ ಬ್ರಂಟ್ ಜೊತೆಗೂಡಿ 73 ಎಸೆತಗಳಲ್ಲಿ 131 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಅವಧಿಯಲ್ಲಿ ಆರಂಭಿಕ ಆಟಗಾರ್ತಿ ಮ್ಯಾಥ್ಯೂಸ್ 39 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 56 ರನ್ ಸಿಡಿಸಿ ಔಟ್ ಆದರು. ಹರ್ಮನ್ ಪ್ರೀತ್ ಕೌರ್ 20 ರನ್ ಸಿಡಿಸಿದರು.
ಇದಕ್ಕೂ ಮೊದಲು, ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಮತ್ತು ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಹೊಂದಿದ್ದಾರೆ. ಇಬ್ಬರೂ ಲೀಗ್‌ನಲ್ಲಿ 99 ರನ್ ಗಳಿಸಿದ ಹೆಗ್ಗಳಿಕೆ ಹೊಂದಿದ್ದರು. RCB ನಾಯಕಿ ಸ್ಮೃತಿ ಮಂಧಾನ ಕೂಡ ಈ ಋತುವಿನಲ್ಲಿ ದಾಖಲೆಯ ಹತ್ತಿರ ಬಂದು ಎಡವಿದರು. ಸ್ಮೃತಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 96 ರನ್ ಗಳಿಸಿದರು. ಆದರೆ ಶತಕ ಬಾರಿಸುವಲ್ಲಿ ಎಡವಿದ್ದರು. ಆದರೆ ಶತಕ ಬಾರಿಸಿರಲಿಲ್ಲ. ಮುಂಬೈ ತಂಡದ ಭರವಸೆಯ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಮೂರಂಕಿ ಮುಟ್ಟಿ ಸಂಭ್ರಮಿಸಿದರು.
ನ್ಯಾಟ್ ಸಿವರ್-ಬ್ರಂಟ್ 57 ಎಸೆತಗಳಲ್ಲಿ 16 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 100 ರನ್ ಬಾರಿಸಿ ಮಿಂಚಿದರು. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ. ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಸೇರಿಸಿತು.