ಇತಿಹಾಸ ನಿರ್ಮಿಸಿದ ಪರಾಸ್ ಖಡ್ಕ: ಕೊಹ್ಲಿ, ಸ್ಮಿತ್ ವಿಶ್ವ ದಾಖಲೆ ಧೂಳೀಪಟ!

ಸಿಂಗಪುರ, ಸೆಪ್ಟೆಂಬರ್ 29: ಸಿಂಗಪುರದ ಇಂಡಿಯನ್ ಅಸೋಸಿಯೇಷನ್ ಗ್ರೌಂಡ್‌ನಲ್ಲಿ ಶನಿವಾರ (ಸೆಪ್ಟೆಂಬರ್ 28) ನಡೆದ ನೇಪಾಳ-ಸಿಂಗಪುರ ನಡುವಿನ ಟಿ20ಐ ತ್ರಿಕೋನ ಸರಣಿಯಲ್ಲಿ ನೇಪಾಳ ನಾಯಕ ಪರಾಸ್ ಖಡ್ಕ ಸ್ಫೋಟಕ ಶತಕದೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.
ಇದರೊಂದಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೆಸರಿನಲ್ಲಿದ್ದ ಟಿ20 ವಿಶ್ವದಾಖಯೊಂದು ಬದಿಗೆ ಸರಿದಿದೆ. ಪರಾಸ್ ಖಡ್ಕ ಇದೇ ಪಂದ್ಯದಲ್ಲಿ ಅನೇಕ ದಾಖಲೆಗೆ ಕಾರಣರಾಗಿದ್ದಾರೆ.
ಜಿಂಬಾಬ್ವೆ, ನೇಪಾಳ, ಸಿಂಗಪುರ್ ನಡುವಿನ ತ್ರಿಕೋನ ಸರಣಿಯಿದು. ಶನಿವಾರದ ಪಂದ್ಯವನ್ನು ನೇಪಾಳ 9 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಖಡ್ಕ ಸ್ಫೋಟಕ ಶತಕ
ಸಿಂಗಪುರ ವಿರುದ್ಧ ನಾಯಕ ಖಡ್ಕ ಕೇವಲ 52 ಎಸೆತಗಳಿಗೆ 106 ರನ್ ಚಚ್ಚಿದರು. ಪರಾಸ್ ಸ್ಫೋಟಕ ಬ್ಯಾಟಿಂಗ್ ಬೆಂಬಲದೊಂದಿಗೆ ನೇಪಾಳ 16 ಓವರ್ ಮುಕ್ತಾಯಕ್ಕೆ 1 ವಿಕೆಟ್ ನಷ್ಟದಲ್ಲಿ 154 ರನ್ ಬಾರಿಸಿ ಗೆಲುವನ್ನಾಚರಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಸಿಂಗಪುರ ತಂಡ ನಾಯಕ ಟಿಮ್ ಡೇವಿಡ್ ಅರ್ಧ ಶತಕ (64 ರನ್)ನೊಂದಿಗೆ 20 ಓವರ್‌ಗೆ 3 ವಿಕೆಟ್ ಕಳೆದು 151 ರನ್ ಮಾಡಿತ್ತು.

ಚೊಚ್ಚಲ ಸೆಂಚುರಿ ಸರದಾರ
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪರಾಸ್ ಖಡ್ಕ ಟಿ20 ಕ್ರಿಕೆಟ್‌ನಲ್ಲಿ ನೇಪಾಳ ಪರ ಚೊಚ್ಚಲ ಶತಕ ಬಾರಿಸಿದ ದಾಖಲೆ ಬರೆದಿದ್ದಷ್ಟೇ ಅಲ್ಲ, ಟಿ20ಐನಲ್ಲಿ ಚೇಸಿಂಗ್ ವೇಳೆ ಶತಕ ಸಿಡಿಸಿದ ವಿಶ್ವದ ಮೊದಲ ನಾಯಕನಾಗಿ ಖಡ್ಕ ವಿಶ್ವದಾಖಲೆ ಬರೆದಿದ್ದಾರೆ. ಅಂದ್ಹಾಗೆ ಪಂದ್ಯದಲ್ಲಿ ಖಡ್ಕ 49 ಎಸೆತಗಳಿಗೆ ಶತಕ ಪೂರೈಸಿದ್ದರು. ಅಲ್ಲದೆ ಖಡ್ಕ ಸಾಧನೆ ಅವರಿಗೆ ಟಿ20ಐನಲ್ಲಿ ಅತೀ ವೇಗವಾಗಿ ಶತಕ ಬಾರಿಸಿದ 4ನೇ ಏಷ್ಯನ್ ನಾಯಕ ಎಂಬ ಹೆಗ್ಗಳಿಕೆಯನ್ನೂ ತಂದಿದೆ.

ದೈತ್ಯರ ದಾಖಲೆ ಬದಿಗೆ
ಟಿ20ಐ ಕ್ರಿಕೆಟ್‌ನಲ್ಲಿ ನಾಯಕರಾಗಿದ್ದು ಚೇಸಿಂಗ್ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ನೆದರ್ಲೆಂಡ್‌ನ ಪೀಟರ್ ಸೀಲಾರ್ ಹೆಸರಿನಲ್ಲಿದೆ. 2019ರ ಸೆಪ್ಟೆಂಬರ್ 16ರಂದು ಸೀಲಾರ್, ಸ್ಕಾಟ್ಲೆಂಡ್ ವಿರುದ್ಧ ಅಜೇಯ 96 ರನ್ ಬಾರಿಸಿದ್ದರು. ಇನ್ನು ಈ ಸಾಧನೆಯಲ್ಲಿ ಸದ್ಯ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2015ರಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್ ಬಾರಿಸಿದ್ದರು. 4ನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ 88 ರನ್ ಬಾರಿಸಿದ್ದರು.

ಕೊಹ್ಲಿಗೆ 8ನೇ ಸ್ಥಾನ
ಟಿ20ಐ ಕ್ರಿಕೆಟ್‌ನಲ್ಲಿ ನಾಯಕನಾಗಿದ್ದು ಚೇಸಿಂಗ್ ವೇಳೆ ಅತ್ಯಧಿಕ ರನ್ ಬಾರಿಸಿದ ದಾಖಲೆ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲಿದ್ದಾರೆ. 2017ರಲ್ಲಿ ಕೊಹ್ಲಿ, ಶ್ರೀಲಂಕಾ ವಿರುದ್ಧ 82 ರನ್ ಬಾರಿಸಿದ್ದರು. ಅಂದ್ಹಾಗೆ ಖಡ್ಕ ನೇಪಾಳ ಪರ ಏಕದಿನ ಶತಕ ಬಾರಿಸಿದ ಮೊದಲ ಕ್ರಿಕೆಟರ್ ಆಗಿಯೂ ಗುರುತಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications