ಎಸಿಸಿ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೇಪಾಳ ಭರ್ಜರಿ 7 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯ ಚಾಂಪಿಯನ್ ಎನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ನೇಪಾಳ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು 2023ನೇ ಸಾಲಿನ ಏಷ್ಯಾಕಪ್ ಟೂರ್ನಿಯಲ್ಲಿ ಭಾಗುಯಾಗುವ ಅರ್ಹತೆಯನ್ನು ಸಂಪಾದಿಸಿದೆ.
ಎಡಗೈ ಸ್ಪಿನ್ನರ್ ಲಲಿತ್ ರಾಜಬನ್ಶಿ ನಾಲ್ಕು ವಿಕೆಟ್ ಕಬಳಿಸಿದ್ದು ಮಾಜಿ ನಾಯಕ ಸಂದೀಪ್ ಲಮಿಚನೆ ಎರಡು ವಿಕೆಟ್ ಸಂಪಾದಿಸುವ ಮೂಲಕ ಯುಎಇ ತಂಡವನ್ನು ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಇದನ್ನು ಬೆನ್ನಟ್ಟಿದ ನೇಪಾಳ ತಮಡ ಆರಂಭದಲ್ಲಿಯೇ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 22 ರನ್‌ಗಳನ್ನು ಗಳಿಸುವಷ್ಟೆಲ್ಲಿ ಈ ಮೂರು ವಿಕೆಟ್ ಕಳೆದುಕೊಂಡಿತ್ತು.

ಆದರೆ ನೇಪಾಳ ತಂಡದ ಪರವಾಗಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದು 17 ವರ್ಷದ ಗುಲ್ಶನ್ ಝಾ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಝಾ, 84 ಎಸೆತಗಳಲ್ಲಿ ಅಜೇಯ 67 ರನ್ ಬಾರಿಸಿದರು. ಭೀಮ್ ಶರ್ಕಿ ಜೊತೆ ಸೇರಿಕೊಂಡು ಅವರು 96 ರನ್‌ಗಳ ಅಮೋಘ ಜೊತರೆಯಾಟದಲ್ಲಿ ಭಾಗಿಯಾದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗುಲ್ಶನ್ ಝಾ ಅವರ ಅತಿ ಹೆಚ್ಚಿನ ಸ್ಕೋರ್ ಆಗಿದ್ದು ಅವರ ಎರಡನೇ ಅರ್ಧ ಶತಕವಾಗಿದೆ.
ಈ ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಗುಲ್ಶನ್ ಝಾ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇನ್ನು ಟೂರ್ನಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಸಂಪಾದಿಸಿದ ಸಂದೀಪ್ ಲಮಿಚ್ಚನೆ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ಏಷ್ಯಾಕಪ್‌ನಲ್ಲಿ ಉಳಿದಕೊಂಡಿದ್ದ ಒಂದು ಸ್ಥಾನಕ್ಕೆ ಅರ್ಹತೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ರತಿಷ್ಠಿತ ಏಷ್ಯಾಕಪ್‌ನಲ್ಲಿ ಆಡಲು ನೇಪಾಳ ತಂಡ ಗಿಟ್ಟಿಸಿಕೊಂಡಿರುವ ಪ್ರಪ್ರಥಮ ಅವಕಾಶವೂ ಹೌದು. 2022ರಲ್ಲಿ ಟಿ20 ಮಾದರಿಯಲ್ಲಿ ನಡೆದ ಏಷ್ಯಾ ಕಪ್‌ನಲ್ಲಿ ಹಾಂಕ್‌ಕಾಂಗ್ ಪ್ರಪ್ರಥಮ ಬಾರಿಗೆ ಆಡುವ ಅವಕಾಶ ಗಿಟ್ಟಿಸಿಕೊಂಡಿತ್ತು. ಆದರೆ ಈ ವರ್ಷ ನಡೆಯಲಿರುವ ಏಕದಿನ ಮಾದರಿಯಲ್ಲಿ ಅವಕಾಶ ಪಡೆಯಲು ಅದು ವಿಫಲವಾಗಿದೆ.
ಇನ್ನು ಐಸಿಸಿ ಪೂರ್ಣಕಾಲಿನ ಸದಸ್ಯ ರಾಷ್ಟ್ರಗಳಾದ ಶ್ರೀಲಂಕಾ, ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈ ಟೂರ್ನಿಗೆ ನೇರವಾಗಿ ಅರ್ಹತೆ ಸಂಪಾದಿತ್ತು. ಇದೀಗ ನೇಪಾಳ ಕೂಡ ಈ ತಮಡಗಳೊಂದಿಗೆ ಅರ್ಹತೆ ಸಂಪಾದಿಸಿಕೊಂಡಿದೆ. ನೇಪಾಳ ಈ ಟೂರ್ನಿಯಲ್ಲಿ ಗ್ರೂಪ್ 'ಎ'ಯಲ್ಲಿ ಭಾರತ, ಪಾಕಿಸ್ತಾನ ತಂಡಗಳ ಜೊತೆಗೆ ಸ್ಥಾನ ಪಡೆದುಕೊಂಡಿದೆ.