
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ದಿನ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ಎರಡನೇ ದಿನದಾಟ ಸಂಪೂರ್ಣ ಮಳೆಗೆ ಆಹುತಿಯಾದ ಬಳಿಕ ಮೂರನೇ ದಿನ ಆಘಾತಕಾರಿ ರೀತಿಯಲ್ಲಿ ಕುಸಿದಿದೆ. ಮೊದಲ ದಿನದಾಟದಲ್ಲಿ 278 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಅತ್ಯಂತ ಸುಸ್ಥಿತಿಯಲ್ಲಿದ್ದ ಭಾರತ ಮೂರನೇ ದಿನದಾಟ ಆರಂಭವಾದ ಒಂದೇ ಗಂಟೆಯಲ್ಲಿ ಆಲೌಟ್ ಆಗಿದೆ. 327 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕೂಡ ಭಾರತ ಕಳೆದುಕೊಂಡಿದೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಇಂದು ನೀಡಿದ ಬ್ಯಾಟಿಂಗ್ ಪ್ರದರ್ಶನದಿಂದ ತಂಡದ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರ ಬೇಜವಾಬ್ಧಾರಿಯುತ ಆಟಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ಒಂದು ದಿನ ಸಂಪೂರ್ಣ ಮಳೆಗೆ ಆಹುತಿಯಾದ ಬಳಿಕ ದಕ್ಷಿಣ ಆಫ್ರಿಕಾದ ಬೌಲರ್‌ಗಳು ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿದಿದ್ದರು. ವೇಗ ಹಾಗೂ ಬೌನ್ಸಿ ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡ ದಕ್ಷಿಣ ಆಫ್ರಿಕಾದ ವೇಗಿಗಳು ಭಾರತೀಯ ಬ್ಯಾಟರ್‌ಗಳನ್ನು ಕ್ರೀಸ್‌ನಲ್ಲಿ ನೆಲೆಯೂರಲು ಅವಕಾಶವೇ ನೀಡಲಿಲ್ಲ. ಮೊದಲಿಗೆ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಕೆಎಲ್ ರಾಹುಲ್ ಅವರನ್ನು ಕಗಿಸೋ ರಬಾಡ ಬಲಿ ಪಡೆದರೆ ನಂತರ ಲುಂಗಿ ಎನ್‌ಗಿಡಿ ಕೂಡ ಭಾರತೀಯ ದಾಂಡಿಗರ ವಿರುದ್ಧ ಯಶಸ್ಸು ಸಾಧಿಸುತ್ತಾ ಹೋದರು. ಅಜಿಂಕ್ಯಾ ರಹಾನೆಯನ್ನು 48 ರನ್‌ಗಳಿಗೆ ಔಟ್ ಮಾಡಿದರು.
ಇನ್ನು ಭಾರತದ ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್, ಆರ್ ಅಶ್ವಿನ್ ಹಾಗೂ ಶಾರ್ದೂಲ್ ಠಾಕೂರ್ ಅವರಂತಾ ಆಟಗಾರರು ಇರುವಾಗ ಒಂದಷ್ಟು ರನ್‌ಗಳು ಹರಿದು ಬರಬಹುದು ಎಂಬ ನಿರೀಕ್ಷೆಯಿರುತ್ತದೆ. ಆದರೆ ಈ ಮೂವರು ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಮೂವರಲ್ಲಿ ಒಬ್ಬರು ಕೂಡ ಎರಡಂಕಿಯನ್ನು ದಾಟಲಿಲ್ಲ. ಅಂತಿಮ ಹಂತದಲ್ಲಿ ಜಸ್ಪ್ರೀತ್ ಬೂಮ್ರಾ 17 ಎಸೆತಗಳನ್ನು ಎದುರಿಸಿ 14 ರನ್‌ಗಳಿಸುವ ಮೂಲಕ ತಂಡಕ್ಕೆ ಅಲ್ಪ ಕೊಡುಗೆಯನ್ನು ನೀಡಿದರು. ಈ ಮೂಲಕ ಟೀಮ್ ಇಂಡಿಯಾ 327 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಇನ್ನು ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಲುಂಗಿ ಎನ್‌ಗಿಡಿ 6 ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಆಘಾತ ನೀಡಿದರು. ರಬಾಡಾ 3 ವಿಕೆಟ್ ಪಡೆದರೆ ಒಂದು ವಿಕೆಟ್ ಮಾರ್ಕೋ ಜಾನ್ಸನ್ ಪಾಲಾಯಿತು.
ಟೀಮ್ ಇಂಡಿಯಾದ ಈ ಕುಸಿತಕ್ಕೆ ಟ್ವಿಟ್ಟರಾಟಿಗಳು ಸಾಕಷ್ಟು ಭಿನ್ನ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಮಡದ ಕುಸಿತಕ್ಕೆ ಹೋಲಿಸಿ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ ತಮಡಕ್ಕೆ ಟೀಮ್ ಇಂಡಿಯಾ ಸಲ್ಲಿಸಿದ ಗೌರವವಿದು ಎಂದಿದ್ದಾರೆ. ನೆಟ್ಟಿಗರಿಂದ ಬಂದ ಪ್ರತಿಕ್ರಿಯಗಳನ್ನು ಮುಂದೆ ನೋಡಿ..
ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಇಶಾಂತ್ ಶರ್ಮಾ
ದಕ್ಷಿಣ ಆಫ್ರಿಲಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ
ಬೆಂಚ್: ಡುವಾನ್ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್