
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಕಂಡು ವಿಶ್ವದ ಕ್ರಿಕೆಟ್ ಪರಿಣಿತರೆಲ್ಲ, ಅಭಿಮಾನಿಗಳೆಲ್ಲ ಆಟಗಾರರನ್ನು ಶ್ಲಾಘಿಸುತ್ತಿದ್ದರೆ, ಬಿಜೆಪಿ ಎಂಪಿ ಬಬುಲ್ ಸುಪ್ರಿಯೊ ಟೀಮ್ ಇಂಡಿಯಾ ಆಟಗಾರರ ಪ್ರದರ್ಶನವನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಸೋಮವಾರ (ಜನವರಿ 11) ಮುಕ್ತಾಯಗೊಂಡ ಮೂರನೇ ಟೆಸ್ಟ್‌ನಲ್ಲಿ ಭಾರತ ಡ್ರಾ ಸಾಧಿಸಿತು. ಅಸಲಿಗೆ ಪಂದ್ಯದಲ್ಲಿ ಭಾರತ ಸೋಲುವುದರಲ್ಲಿತ್ತು. ಆದರೆ 'ಗ್ರೇಟ್ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಅವರಂತೆ 'ವಾಲ್ ಟೆಕ್ನಿಕ್' ಬಳಸಿದ ಭಾರತೀಯ ಆಟಗಾರರು ಬೇಗನೆ ವಿಕೆಟ್ ಒಪ್ಪಿಸದೆ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.
ಸೋಮವಾರ ಐದನೇ ದಿನದಾಟದ ವೇಳೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ 161 ಎಸೆತಗಳಿಗೆ ಅಜೇಯ 23, ಆರ್ ಅಶ್ವಿನ್ 128 ಎಸೆತಗಳಿಗೆ ಅಜೇಯ 39 ರನ್ ಬಾರಿಸಿದ್ದರು. ದಿನದಾಟ ಮುಗಿಯುವ ವೇಳೆ ಭಾರತ 131 ಓವರ್‌ಗೆ 5 ವಿಕೆಟ್ ಕಳೆದು 334 ರನ್ ಬಾರಿಸಿದ್ದರಿಂದ ಫಲಿತಾಂಶವನ್ನು ಡ್ರಾ ಎಂದು ಘೋಷಿಸಲಾಯ್ತು.
ಆದರೆ ವಿಹಾರಿಯನ್ನು ದೂರಿದ್ದ ಬಬುಲ್, 'ಭಾರತ ಐತಿಹಾಸಿಕ ಗೆಲುವು ದಾಖಲಿಸುವುದನ್ನು ಹನುಮ ವಿಹಾರಿ ತಪ್ಪಿಸಿದ್ದಷ್ಟೇ ಅಲ್ಲ, ಕ್ರಿಕೆಟ್ ಅನ್ನೂ ಕೊಂಡುಬಿಟ್ಟರು. ಅವರು ಗೆಲುವನ್ನು ಆಯ್ಕೆಯಾಗಿಡಲೇ ಇಲ್ಲ, ಯಾಂತ್ರಿಕವಾಗಿ ಅಪರಾಧ ಮಾಡಿಬಿಟ್ಟರು,' ಎಂದು ಟ್ವೀಟ್ ಮಾಡಿದ್ದರು. ಟೆಸ್ಟ್ ಕ್ರಿಕೆಟ್ ಬಗ್ಗೆ ತಿಳುವಳಿಕೆಯಿಲ್ಲದೆ ಟ್ವೀಟ್ ಮಾಡಿರುವ ಬಿಜೆಪಿ ಎಂಪಿಗೆ ನೆಟ್ಟಿಗರು ಬಗೆ ಬಗೆ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.