
ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿತ್ತು. ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅನುಮಾನಕ್ಕೆ ಇದು ಎಡೆ ಮಾಡಿಕೊಟ್ಟಿತ್ತು. ಈ ಎಲ್ಲಾ ಅನುಮಾನಗಳಿಗೆ ಸ್ವತಃ ವಿರಾಟ್ ಕೊಹ್ಲಿಯೇ ಉತ್ತರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹಿಂದಕ್ಕುಳಿಯುವ ಬಗೆಗಿನ ವರದಿಯ ಬಗ್ಗೆಯೂ ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಉತ್ತರವನ್ನು ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಕ್ಕಿಳಿಸಲಾಯಿತು ಎಂಬ ಬಗ್ಗೆಯೂ ವಿರಾಟ್ ಕೊಹ್ಲಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಏಕದಿನ ನಾಯಕತ್ವವನ್ನು ಬದಲಾಯಿಸುವ ಬಗ್ಗೆ ಕೇವಲ ಒಂದೂವರೆ ಗಂಟೆಗಳ ಮುನ್ನ ನನಗೆ ಕರೆ ಮಾಡಿ ತಿಳಿಸಲಾಯೊತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ
ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯ: ಇನ್ನು ಈ ಮಾಧ್ಯಮಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಲಭ್ಯವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ತಾನು ಈ ಸರಣಿಗಾಗಿ ವಿಶ್ರಾಂತಿಯನ್ನು ಕೇಳಿಯೇ ಇಲ್ಲ ಎಂದು ಕೂಡ ಕೊಹ್ಲಿ ಹೇಳಿದ್ದಾರೆ. ಮುಂಬರುವ ಏಕದಿನ ಸರಣಿಗೆ ನಾನು ಲಭ್ಯವಿದ್ದೇನೆ, ನಾನು ಯಾವಾಗಲೂ ಲಭ್ಯವಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಅತ್ಯಂತ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ
ಏಕದಿನ ನಾಯಕತ್ವದ ಬದಲಾವಣೆಯ ಸೂಚನೆ ಇರಲಿಲ್ಲ: ಇನ್ನು ವಿರಾಟ್ ಕೊಹ್ಲಿ ಏಕದಿನ ನಾಯಕತ್ವ ಬದಲಾವಣೆ ಗೊಂದಲದ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಚಾರವಾಗಿ ಕೊಹ್ಲಿ ಟೆಸ್ಟ್ ಸರಣಿಯ ಆಯ್ಕೆ ವಿಚಾರವಾಗಿ ಆಯ್ಕೆಗಾರರು ಮೊದಲಿಗೆ ನನ್ನ ಬಳಿ ಕರೆ ಮಾಡಿ ಚರ್ಚಿಸಿದರು. ಈ ಕರೆ ಅಂತ್ಯವಾಗುವ ಮುನ್ನ ಐವರು ಆಯ್ಕೆಗಾರರು ಇನ್ನು ಮುಂದೆ ಏಕದಿನ ಸರಣಿಗೆ ತಾನು ನಾಯಕನಾಗಿ ಇರುವುದಿಲ್ಲ ಎಂಬುದನ್ನು ತಿಳಿಸಿದರು. ಇದಕ್ಕೂ ಮುನ್ನ ನನ್ನ ಬಳಿ ಈ ವಿಚಾರವಾಗಿ ಯಾವುದೇ ಚರ್ಚೆ ನಡೆಸಿರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನನ್ನ ಹಾಗೂ ರೋಹಿತ್ ಮಧ್ಯೆ ಭಿನ್ನಾಪ್ರಾಯ ಇಲ್ಲ: ಇನ್ನು ಈ ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ತನ್ನ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ನನ್ನ ಹಾಗೂ ರೋಹಿತ್ ಶರ್ಮಾ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇದನ್ನು ನಾನು ಕಳೆದ ಎರಡು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದ್ದೇನೆ. ಇದನ್ನು ಹೇಳಿ ಹೇಳಿ ನಾನು ಸುಸ್ತಾಗಿದ್ದೇನೆ. ತಂಡವನ್ನು ಕುಗ್ಗಿಸುವಂತಾ ಯಾವುದೇ ನಿರ್ಧಾರಗಳನ್ನು ನಾನು ತೆಗೆದುಕೊಳ್ಳುವುದಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ನಾಯಕತ್ವದಿಂದ ಕೆಳಗಿಳಿಸಿದ ಕಾರಣವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ: ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಏಕದಿನ ತಂಡದ ನಾಯಕತ್ವದಿಂದ ಕೆಳಕ್ಕಿಳಿದ ಕಾರಣದ ಬಗ್ಗೆಯೂ ಹೇಳಿದ್ದಾರೆ. "ತನ್ನನ್ನು ಏಕದಿನ ತಂಡದಿಂದ ಕೆಳಕ್ಕಿಳಿಸಿದ ಕಾರಣವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಬಿಸಿಸಿಐ ತಾರ್ಕಿಕ ದೃಷ್ಟಿಕೋನದಿಂದ ಈ ನಿರ್ಧಾರಗಳನ್ನು ತೆಗೆದುಕೊಂಡಿದೆ" ಎಂದಿದ್ದಾರೆ ವಿರಾಡ್ ಕೊಹ್ಲಿ.
ರೋಹಿತ್ ಶರ್ಮಾ ಸಮರ್ಥ ನಾಯಕ: ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಭಾರತದ ಸೀಮಿತ ಈವರ್‌ಗಳ ಮಾದರಿಯ ನಾಯಕತ್ವ ವಹಿಸಿಕೊಂಡ ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. "ನನ್ನ ಜವಾಬ್ಧಾರಿ ಏನೆಂದರೆ ತಂಡವನ್ನು ಸೂಕ್ತ ಹಾದಿಯಲ್ಲಿ ತಂಡವನ್ನು ಮುನ್ನುಗ್ಗಿಸುವುದಾಗಿದೆ. ರೋಹಿತ್ ಶರ್ಮಾ ಅತ್ಯಂತ ಸಮರ್ಥವಾದ ನಾಯಕ ಅಲ್ಲದೆ ರಣತಂತ್ರದಲ್ಲಿಯೂ ತುಂಬಾ ಬಲಿಷ್ಠವಾಗಿದ್ದಾರೆ. ಅವರಿಗೆ ರಾಹುಲ್ ದ್ರಾವಿಡ್ ಅವರ ಬೆಂಬಲವೂ ಇದೆ. ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅವರಿಗೆ ನನ್ನ ಕಡೆಯಿಂದ 100% ಬೆಂಬಲ ದೊರೆಯಲಿದೆ" ಎಂದಿದ್ದಾರೆ ವಿರಾಟ್ ಕೊಹ್ಲಿ.