
ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್ 14ರಂದು ನಡೆದ ಫೈನಲ್ ಪಂದ್ಯದ ಮೂಲಕ ಅಧಿಕೃತವಾಗಿ ತೆರೆಬಿದ್ದಿದೆ. ಈ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟವನ್ನು ನಡೆಸಿದವು. ಆರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನೇನೂ ನೀಡದೇ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಇದೇ ತಿಂಗಳ 17ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಗಳಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.
ಮೊದಲಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು, ಮೊದಲನೇ ಟಿ ಟ್ವೆಂಟಿ ಪಂದ್ಯ ನವೆಂಬರ್ 17ರ ಬುಧವಾರದಂದು ರಾಜಸ್ತಾನದ ಜೈಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗೆ ನಾಳೆಯಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಗೆ ಇತ್ತಂಡಗಳಲ್ಲಿಯೂ ಭಾರಿ ಬದಲಾವಣೆಯಾಗಿದ್ದು ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದರೆ, ಕೇನ್ ವಿಲಿಯಮ್ಸನ್ ಅಲಭ್ಯರಾಗಿರುವ ಕಾರಣ ನ್ಯೂಜಿಲೆಂಡ್ ತಂಡವನ್ನು ಟಿಮ್ ಸೌಥಿ ಮುನ್ನಡೆಸಲಿದ್ದಾರೆ.
ಈಗಾಗಲೇ ಎರಡೂ ತಂಡಗಳ ಆಟಗಾರರು ಜೈಪುರ ತಲುಪಿದ್ದು ಕಳೆದೆರಡು ದಿನಗಳಿಂದ ಅಭ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರವಿಶಾಸ್ತ್ರಿ ತಮ್ಮ ಸ್ಥಾನದಿಂದ ಕೆಳಗಿಳಿಸಿದ್ದು ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಹೀಗೆ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡ ನಂತರ ತಂಡವನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ಮೊಟ್ಟಮೊದಲ ಬಾರಿಗೆ ಮುನ್ನಡೆಸಲಿದ್ದಾರೆ. ಹೀಗಾಗಿ ಈ ಪಂದ್ಯ ಆರಂಭವಾಗುವ ಮುನ್ನ ಟೀಮ್ ಇಂಡಿಯಾ ಆಟಗಾರರ ಜೊತೆ ಮೈದಾನಕ್ಕಿಳಿದಿರುವ ರಾಹುಲ್ ದ್ರಾವಿಡ್ ಆಟಗಾರರಿಗೆ ತರಬೇತಿ ನೀಡಿದ್ದಾರೆ.
ರಾಹುಲ್ ದ್ರಾವಿಡ್ ಖುದ್ದಾಗಿ ನಿಂತು ತಂಡದ ವಿವಿಧ ಆಟಗಾರರಿಗೆ ತರಬೇತಿ ನೀಡುತ್ತಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಹೊಸ ಜವಾಬ್ದಾರಿಗಳು, ಹೊಸ ಸವಾಲುಗಳು ಮತ್ತು ಹೊಸ ಆರಂಭಗಳು ಎಂದು ಬರೆದುಕೊಂಡಿದೆ. ಈ ಮೂಲಕ ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಮತ್ತು ನೂತನ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆದ್ದು ಶುಭಾರಂಭ ಮಾಡುವ ಯೋಜನೆಯಲ್ಲಿದ್ದಾರೆ.
ಟಿ20 ಸರಣಿಗೆ ಕೇನ್ ವಿಲಿಯಮ್ಸನ್ ಅಲಭ್ಯ:
ಇತ್ತೀಚೆಗಷ್ಟೇ ಮುಗಿದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಗೆ ಅಲಭ್ಯರಾಗಲಿದ್ದು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನವೆಂಬರ್ 17ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಲಿದ್ದು ಕೇನ್ ವಿಲಿಯಮ್ಸನ್ ಅಲಭ್ಯರಾಗಿರುವ ಕಾರಣ ಟಿಮ್ ಸೌಥಿ ನ್ಯೂಜಿಲೆಂಡ್ ತಂಡವನ್ನು ಈ ಸರಣಿಯಲ್ಲಿ ನಾಯಕನಾಗಿ ಮುನ್ನಡೆಸಲಿದ್ದಾರೆ.