
ಮಂಗಳವಾರ, ಜನವರಿ 3ರಿಂದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ ಸಿದ್ಧವಾಗಿದೆ.
ಭಾರತ ಕ್ರಿಕೆಟ್ ತಂಡಕ್ಕಾಗಿ 2023ರ ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ಹೊಸ ವರ್ಷದ ಸಂಕಲ್ಪವಾಗಿದೆ ಎಂದು ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಭಾರತವು ಅಕ್ಟೋಬರ್‌ನಲ್ಲಿ ಐಸಿಸಿ ಪುರುಷರ ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲು ಮಾತನಾಡಿದ ಹಾರ್ದಿಕ್ ಪಾಂಡ್ಯ, ಭಾರತವು ಟಿ20 ವಿಶ್ವಕಪ್ ಗೆಲ್ಲದಿದ್ದರೂ, ಇದು ತನಗೆ ಉತ್ತಮ ವರ್ಷವಾಗಿದೆ ಎಂದು ಹೇಳಿದರು.
"ನಿಸ್ಸಂಶಯವಾಗಿ ಒಂದು ವರ್ಷದ ಹಿಂದೆ ಪರಿಸ್ಥಿತಿಗಳು ವಿಭಿನ್ನವಾಗಿತ್ತು. ತಂಡದಿಂದ ಹೊರಗೆ ಹೋಗಿ ಉತ್ತಮಗೊಳ್ಳಲು ನನಗೆ ಮಾಂತ್ರಿಕ ವರ್ಷವಾಗಿದೆ. ಕಳೆದ ವರ್ಷ ನಾವು ಟಿ20 ವಿಶ್ವಕಪ್ ಗೆಲ್ಲಲು ಬಯಸಿದ್ದೆವು, ಆದರೆ ಅದು ಆಗಲಿಲ್ಲ. ಸೋಲು ಆಟದ ಒಂದು ಭಾಗವಾಗಿದೆ," ಎಂದು ಹಾರ್ದಿಕ್ ಪಾಂಡ್ಯ ಹೇಳಿದರು.

ತನ್ನ ವೃತ್ತಿ ಜೀವನದಲ್ಲಿ ಇನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ. ಇನ್ನೂ ಏನನ್ನೂ ಸಾಧಿಸಿಲ್ಲ ಎಂದು ತಮ್ಮನ್ನು ತಾವೇ ಲೇವಡಿ ಮಾಡಿಕೊಂಡರು.
"ಮುಂದೆ ನಾನು ಏನನ್ನಾದರೂ ಸಾಧಿಸಲು ಬಯಸುತ್ತೇನೆ, ಸಾಧಿಸಲು ಬಹಳಷ್ಟಿದೆ. ನನ್ನ ವೃತ್ತಿ ಜೀವನದಲ್ಲಿ ನಾನು ಏನನ್ನೂ ಸಾಧಿಸಿಲ್ಲ. ಆದ್ದರಿಂದ, ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದೇನೆ ಮತ್ತು ವಿಶ್ವಕಪ್ ಗೆಲ್ಲುವ ಗುರಿಯಿದೆ," ಎಂದು ಟಿ20 ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದರು.
ಇದೇ ವೇಳೆ ಟೀಂ ಇಂಡಿಯಾದೊಂದಿಗೆ ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ಹೊಸ ವರ್ಷದ ಸಂಕಲ್ಪವಾಗಿದೆ ಎಂದು ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹೇಳಿದ್ದಾರೆ.

"ಹೊಸ ವರ್ಷದ ಸಂಕಲ್ಪವೆಂದರೆ ವಿಶ್ವಕಪ್ ಗೆಲ್ಲುವುದು. ಅದಕ್ಕಿಂತ ದೊಡ್ಡದಾವುದು ಇರಬಹುದೆಂದು ನನಗನಿಸುವುದಿಲ್ಲ. ವಿಶ್ವಕಪ್ ಗೆಲ್ಲಲು ನಾವು ಪ್ರಯತ್ನಿಸುತ್ತೇವೆ," ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟರು.
"ನನಗೆ ಶ್ರಮದ ಭಾಷೆ ಗೊತ್ತು. ನನ್ನ ಜೀವನದಲ್ಲಿ ನನಗೆ ಬೇರೆ ಭಾಷೆ ತಿಳಿದಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷ ನಾನು ನನ್ನನ್ನು ಮರಳಿ ಪಡೆಯಲು ಏಕೈಕ ವಿಷಯವೆಂದರೆ ನನ್ನ ಕಠಿಣ ಪರಿಶ್ರಮ. ಕಷ್ಟಪಟ್ಟು ಕೆಲಸ ಮಾಡುತ್ತಿರಿ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ".
"ನಾನು ನನ್ನ ದೇಹಕ್ಕೆ ಸಾಕಷ್ಟು ಅವಕಾಶಗಳನ್ನು ನೀಡಲು ಬಯಸುತ್ತೇನೆ ಮತ್ತು ನನ್ನ ಅತ್ಯುತ್ತಮ ಆಟವಾಡಲು ಬಯಸುತ್ತೇನೆ," ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.