ಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ

ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಆಸ್ಟ್ರೇಲಿಯಾ ಸಂಪೂರ್ಣ ವೈಫಲ್ಯವನ್ನು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ 0-1 ಅಂತರದ ಹಿನ್ನೆಡೆ ಅನುಭವಿಸಿದೆ.
ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರಚಚ್‌ನಲ್ಲಿರುವ ಹಾಗ್ಲೇ ಓವಲ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆಸಿಸ್ ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆಸಿಸ್ ಬೌಲರ್‌ಗಳು ಅರಂಭದಲ್ಲಿ ಯಶಸ್ವಿಯಾದರು. ಆದರೆ ಬಳಿಕ ಆತಿಥೇಯರು ಆಸಿಸ್ ಬೌಲರ್‌ಗಳ ಮೇಲೆ ಸವಾರಿ ಮಾಡಲು ಆರಂಭಿಸಿದರು.

ಆರಂಭಿಕ ಆಘಾತ ಅನುಭವಿಸಿದ ಕೀವಿಸ್
ನ್ಯೂಜಿಲೆಂಡ್ ತಂಡ ಮೊದಲ ಓವರ್‌ನ ಮೂರನೇ ಎಸೆತದಲ್ಲಿಯೇ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ವಿಕೆಟ್ ಕಳೆದುಕೊಂಡಿತು. ಆಗಿನ್ನೂ ನ್ಯೂಜಿಲೆಂಡ್ ರನ್ ಖಾತೆಯನ್ನೇ ತೆರೆದಿರಲಿಲ್ಲ. 11 ರನ್ ಗಳಿಸಿದ್ದಾಗ ಇನ್ನೋರ್ವ ಆರಂಭೀಕ ಆಟಗಾರ ಸೈಫರ್ಟ್ ಕೂಡ ವಿಕೆಟ್ ಕಳೆದುಕೊಂಡರು. ತಂಡದ ಮೊತ್ತ 19 ಆಗಿದ್ದ ವೇಳೆ ನ್ಯೂಜಿಲೆಂಡ್ ತಂಡ ತನ್ನ ನಾಯಕ ಕೇನ್ ವಿಲಿಯಮ್ಸನ್ ವಿಕೆ್ ಕೂಡ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಕಾನ್ವೆ ಭರ್ಜರಿ ಅಜೇಯ 99 ರನ್
ಆದರೆ ಬಳಿಕ ಬ್ಯಾಟಿಂಗ್‌ಗೆ ಇಳಿದ ಡೆವೋನ್ ಕಾನ್ವೆ ಶ್ರೇಷ್ಠ ಪ್ರದರ್ಶನವನ್ನು ನಿಡುವ ಮೂಲಕ ನ್ಯೂಜಿಲೆಂಡ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ನಾಲ್ಕನೇ ವಿಕೆಟ್‌ಗೆ ಗ್ಲೆನ್ ಫಿಲಿಪ್ಸ್ ಜೊತೆಗೆ 74 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿದ ಕಾನ್ವೆ ಬಳಿಕ ನೀಶಮ್ ಜೊತೆಗೆ 47 ರನ್‌ಗಳ ಜೊತೆಯಾಟವನ್ನು ನೀಡಿದರು. 59 ಎಸೆತವನ್ನು ಎದುರಿಸಿದ ಕಾನ್ವೆ 99 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ನ್ಯೂಜಿಲೆಂಡ್ ತಂಡ 184 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು.

ಆಸಿಸ್ ಪಡೆಗೂ ಆರಂಭದಲ್ಲೇ ಆಘಾತ
ನ್ಯೂಜಲೆಂಡ್ ನೀಡಿದ ಈ ಮೊತ್ತವನ್ನು ಬೆನ್ನಟ್ಟಲು ಮುಂದಾದ ಆಸ್ಟ್ರೇಲಿಯಾ ಕೂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಈ ಆಘಾತದಿಂದ ಆಸಿಸ್ ಚೇತರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆಸ್ಟ್ರೇಲಿಯಾ 19 ರನ್ ಗಳಿಸುವಷ್ಟರಲ್ಲಿ ತಂಡದ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ವಿಚೆಲ್ ಮಾರ್ಶ್ (45 ರನ್) ಹಾಗೂ ಆಷ್ಟನ್ ಆಗರ್(23 ರನ್) ಮಾತ್ರವೇ ಕೀವಿಸ್ ದಾಳಿಗೆ ಒಂದಷ್ಟು ಪ್ರತಿರೋಧವನ್ನು ಒಡ್ಡಿದರು.

53 ರನ್‌ಗಳ ಸೋಲು ಕಂಡ ಆಸಿಸ್
ಆಸ್ಟ್ರೇಲಿಯಾ 13.3 ಓವರ್‌ಗಳಲ್ಲಿ 131 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. ಈ ಮೂಲಕ ಮೊದಲ ಟಿ20 ಪಂದ್ಯದಲ್ಲಿ 53 ರನ್‌ಗಳ ಅಂತರದಿಂದ ಆತಿಥೇಯ ಕೀವಿಸ್ ಪಡೆಗೆ ಶರಣಾಗಿದೆ. ಎರಡನೇ ಪಂದ್ಯ ಫೆಬ್ರವರಿ 25ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications