ಕೊಲಂಬೊ: ಟಿ20 ವಿಶ್ವಕಪ್ ಸೂಪರ್ 8 ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 61 ರನ್‌ಗಳಿಂದ ಮಣಿಸಿದ ಕಿವೀಸ್ ಅಬ್ಬರಿಸಿದೆ. ಈ ಮೂಲಕ ಸೆಮಿಫೈನಲ್ ಪ್ರವೇಶಿಸುವ ಹಾದಿಯನ್ನು ಹಸಿರಾಗಿರಿಸಿಕೊಂಡಿತ್ತು. ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಭರ್ಜರಿ ಪ್ರದರ್ಶನ ನೀಡಿದ ದೊಡ್ಡ ದಾಖಲೆಯನ್ನು ನಿರ್ಮಿಸಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಿತು. ಈ ಪಂದ್ಯದಲ್ಲಿ ಕಿವೀಸ್ 84 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮಿಚೆಲ್ ಸ್ಯಾಂಟ್ನರ್ 47 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ಲಂಕಾ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 107 ರನ್ ಸೇರಿಸಿ ಸೋಲು ಕಂಡಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮಹತ್ವದ ಮೈಲಿಗಲ್ಲು ಸಾಧಿಸಿದರು. ಈ ಮೂಲಕ ಶ್ರೀಲಂಕಾ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. 2014 ರಲ್ಲಿ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಾಗಿನಿಂದ, ಇದುವರೆಗೆ ನಡೆದ ಎಲ್ಲಾ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಲು ಸಾಧ್ಯವಾಗಿಲ್ಲ.

ಒತ್ತಡದಲ್ಲಿ ಮಹತ್ವದ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮಿಚೆಲ್ ಸ್ಯಾಂಟ್ನರ್ ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಇವರು ಬುಧವಾರ ನಡೆದ ಪಂದ್ಯದಲ್ಲಿ ಮಿಚೆಲ್ 26 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಾಯದಿಂದ 47 ರನ್ ಸಿಡಿಸಿದರು. ಈ ಇನಿಂಗ್ಸ್ ಮೂಲಕ ಸ್ಯಾಂಟ್ನರ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 1,000 ರನ್‌ಗಳ ಗಡಿಯನ್ನು ದಾಟಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ 100 ವಿಕೆಟ್ ಪಡೆದು 1000 ರನ್ ಪಡೆದ ಸಾಧನೆಯನ್ನು ಮಾಡಿದರು.
ಐಸಿಸಿ ಪೂರ್ಣ ಸದಸ್ಯ ತಂಡಗಳಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಸ್ಯಾಂಟ್ನರ್ ಆರನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. 34 ವರ್ಷದ ಸ್ಯಾಂಟ್ನರ್ ನ್ಯೂಜಿಲೆಂಡ್ ಪರ 132 ಪಂದ್ಯಗಳನ್ನು ಆಡಿದ್ದು, ಇವರು 20.01 ರ ಸರಾಸರಿಯಲ್ಲಿ 1,021 ರನ್ ಗಳಿಸಿದ್ದಾರೆ. ಅಲ್ಲದೆ 127 ವಿಕೆಟ್ ಕಬಳಿಸಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕಿವೀಸ್ ಪರ ಸ್ಯಾಂಟ್ನರ್ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು 78 ವಿಕೆಟ್ ಕಬಳಿಸಿದ್ದು, 1085 ರನ್ ಸಿಡಿಸಿದ್ದಾರೆ. ಅಲ್ಲದೆ 124 ಏಕದಿನ ಪಂದ್ಯಗಳಲ್ಲಿ 133 ವಿಕೆಟ್ ಪಡೆದಿದ್ದು, 1580 ರನ್ ಕಲೆ ಹಾಕಿದ್ದಾರೆ.