
ಲಂಡನ್: ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಭಾರತ ವಿರುದ್ಧದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್ ತಂಡ ಮೇ 16ರ ಭಾನುವಾರ ಇಂಗ್ಲೆಂಡ್‌ನ ಲಂಡನ್‌ಗೆ ಬಂದಿಳಿದಿದೆ. ಜೂನ್ 2ರಿಂದ ನ್ಯೂಜಿಲೆಂಡ್-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.
ಸಿಂಗಾಪುರ್ ದಾರಿಯಾಗಿ ಆಕ್ಲೆಂಡ್‌ನಿಂದ ಲಂಡನ್‌ಗೆ ಬಂದ ನ್ಯೂಜಿಲೆಂಡ್ ಆಟಗಾರರನ್ನು ಸೌತಾಂಪ್ಟನ್‌ನಲ್ಲಿರುವ ಏಜಸ್ ಬೌಲರ್‌ಗೆ ಕಳುಹಿಸಲಾಗಿದೆ. ಪ್ರವಾಸದ ಮೊದಲ ಎರಡು ವಾರಗಳನ್ನು ಆಟಗಾರರು ಅಲ್ಲಿ ಕಳೆಯಲಿದ್ದಾರೆ.
ಜೂನ್ 2ರಂದು ಮೊದಲ ಟೆಸ್ಟ್ ಪಂದ್ಯ ನಡೆದರೆ, ಜೂನ್ 10ರಂದು ದ್ವಿತೀಯ ಟೆಸ್ಟ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯ ಲಂಡನ್‌ನಲ್ಲಿ ನಡೆದರೆ ದ್ವಿತೀಯ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಅದಾಗಿ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 18ರಿಂದ 22ರ ವರೆಗೆ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.
ಮೊದಲ ಮೂರು ದಿನ ನ್ಯೂಜಿಲೆಂಡ್ ತಂಡ ಐಸೊಲೇಶನ್‌ನಲ್ಲಿ ಕಳೆದರೆ ಆ ಬಳಿಕ ಅಭ್ಯಾಸ ನಡೆಯಲಿದೆ. ಮತ್ತೆ ಮೇ 26-28ರ ವರೆಗೆ ಅಂತರ್ ತಂಡಗಳ ಮಧ್ಯೆ ಅಭ್ಯಾಸ ಪಂದ್ಯ ನಡೆಯಲಿದೆ. ಟಿಮ್ ಸೌಥೀ, ಬಿಜೆ ವಾಟ್ಲಿಂಗ್, ರಾಸ್ ಟೇಲರ್, ನೀಲ್ ವ್ಯಾಗ್ನರ್ ಬ್ಲ್ಯಾಕ್‌ಕ್ಯಾಪ್ಸ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.