ಕ್ರಿಕೆಟ್ ಅಂಗಳದಲ್ಲಿ ದಿನಕ್ಕೊಂದು ದಾಖಲೆಗಳು ನಿರ್ಮಾಣ ವಾಗುತ್ತಲೇ ಇರುತ್ತವೆ. ದಿನವೂ ದಾಖಲೆಯ ಪುಟಕ್ಕೆ ಕೆಲಸ ಇದ್ದೇ ಇರುತ್ತದೆ. ಆಟಗಾರ ತನ್ನಲ್ಲಿರುವ ಕ್ಷಮತೆಯನ್ನು ಹೊರ ಹಾಕಿದಾಗ ಹೊಸ ಸಾಧನೆ ನಿರ್ಮಾಣವಾಗುತ್ತದೆ. ಈಗ ಕ್ರಿಕೆಟ್ ಅಂಗಳದಲ್ಲಿ ನಿರ್ಮಾಣವಾಗಿರುವ ದಾಖಲೆ ಅಭಿಮಾನಿಗಳನ್ನು ಅವರತ್ತ ನೋಡುವಂತೆ ಮಾಡಿದೆ. ಹಾಗಿದ್ದಾರೆ ಆ ದಾಖಲೆ ಯಾವುದು? ಬರೆದಿರುವ ದಾಖಲೆ ಏನು? ಯಾವ ದೇಶದ ಆಟಗಾರ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಈ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ಸದ್ಯ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಕಿವೀಸ್ ತಂಡದ 32 ವರ್ಷದ ಬ್ಯಾಟರ್ ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಯಾರು ಮಾಡದ ಸಾಧನೆ ಮಾಡಿದ್ದಾರೆ. ಫೋರ್ಡ್ ಟ್ರೋಫಿಯಲ್ಲಿ ಕ್ಯಾಂಟರ್‌ಬರಿ ತಂಡದ ಪರ ಅಮೋಘ ಪ್ರದರ್ಶನ ನೀಡಿ ದಾಖಲೆಯ ಪುಟಕ್ಕೆ ಸ್ಥಾನ ಪಡೆದಿದ್ದಾರೆ.

ನ್ಯೂಜಿಲೆಂಡ್ನಲ್ಲಿ ದೇಶೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಈ ಟೂರ್ನಿಯಲ್ಲಿ ಕ್ಯಾಂಟರ್‌ಬರಿ ಮತ್ತು ಒಟಾಗೊ ವೋಲ್ಟ್ಸ್ ನಡುವೆ ಲಿಸ್ಟ್-ಎ ಪಂದ್ಯವನ್ನು ನಡೆಯಿತು. ಈ ಪಂದ್ಯದಲ್ಲಿ ಕ್ಯಾಂಟರ್ಬರಿ ಪರ ಸ್ಟಾರ್ ಆಟಗಾರ ಚಾಡ್ ಬೌಸ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇವರ ಸ್ಪೋಟಕ ಬ್ಯಾಟಿಂಗ್‌ನಿಂದ ದಾಖಲೆಯ ಪುಟಕ್ಕೆ ಸ್ಥಾನ ಪಡೆದರು. ಇವರು ಈ ಪಂದ್ಯದಲ್ಲಿ 103 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದಾರೆ. ಈ ಮೂಲಕ ಇವರು ಇತಿಹಾಸ ನಿರ್ಮಿಸಿದರು.
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿರುವ ಚಾಡ್ ಬೌಸ್ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಲೀಸ್ಟ್ ಎ ಕ್ರಿಕೆಟ್‌ನಲ್ಲಿ ವೇಗದ ದ್ವಿಶತಕ ಬಾರಿಸಿದರು. ಈ ಮೂಲಕ ಟ್ರಾವಿಸ್ ಹೆಡ್ ಹಾಗೂ ಭಾರತದ ನಾರಾಯಣ ಜಗದೀಶನ್ ಅವರ ದಾಖಲೆಗಳನ್ನು ಅಳಿಸಿ ಹಾಕಿದರು. ಇವರಿಬ್ಬರೂ ಲಿಸ್ಟ್-ಎಯಲ್ಲಿ 114 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಅಬ್ಬರಿಸಿದ್ದರು. ಚಾಡ್ ಬೌಸ್ ಅಮೋಘ ಇನಿಂಗ್ಸ್‌ನಲ್ಲಿ 27 ಬೌಂಡರಿ, 7 ಸಿಕ್ಸರ್ ಸೇರಿವೆ. ಅಲ್ಲದೆ ಇವರು 110 ಎಸೆತಗಳಲ್ಲಿ 205 ರನ್ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು.
ಚಾಡ್ ಬೌಸ್ ಹೊರತುಪಡಿಸಿ, ಜಕಾರಿ ಫೌಲ್ಕ್ಸ್ 49 ರನ್ ಸಿಡಿಸಿ ತಂಡಕ್ಕೆ ಆಧಾರವದರು. ಕ್ಯಾಂಟರ್‌ಬರಿ ತಂಡ ನಿಗದಿತ 50 ಓವರ್‌ಗಳಲ್ಲಿ 343 ರನ್ ಗಳಿಸಿದೆ. ಈ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಕ್ಯಾಂಟರ್‌ಬರಿ ಜಯ ಸಾಧಿಸಿತು.
ಚಾಡ್ ಬೌಸ್ 2023ರಲ್ಲಿ ನ್ಯೂಜಿಲೆಂಡ್ ಪರ ಪದಾರ್ಪಣೆ ಮಾಡಿದರು. ಇವರು ಈಗಾಗಲೇ ಆರು ಏಕದಿನ ಪಂದ್ಯಗಳನ್ನು ಆಡಿದ್ದು ಅರ್ಧಶತಕ ಸೇರಿದಂತೆ 99 ರನ್ ಸಿಡಿಸಿದ್ದಾರೆ. ಅಲ್ಲದೆ 11 ಟಿ20 ಪಂದ್ಯಗಳಲ್ಲಿ 187 ರನ್ ಸಿಡಿಸಿದ್ದಾರೆ.