ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದ ಟೀಮ್ ಇಂಡಿಯಾ!

ಆಕ್ಲೆಂಡ್, ಫೆಬ್ರವರಿ 8: ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಐದೂ ಪಂದ್ಯ ಗೆದ್ದು ಬೀಗಿದ್ದ ಟೀಮ್ ಇಂಡಿಯಾಕ್ಕೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಭಂಗವಾಗಿದೆ. ಆರಂಭಿಕ ಎರಡೂ ಪಂದ್ಯಗಳನ್ನೂ ಸೋತಿರುವ ವಿರಾಟ್ ಕೊಹ್ಲಿ ಪಡೆ, ಸರಣಿಯನ್ನು 2-0ಯಿಂದ ಕಳೆದುಕೊಂಡಿದೆ.
ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಸೋಲು ಕಂಡಿದ್ದ ಭಾರತ, ಶನಿವಾರ (ಫೆಬ್ರವರಿ 8) ಆಕ್ಲೆಂಡ್‌ನಲ್ಲಿ ನಡೆದ ಪಂದ್ಯವನ್ನೂ 22 ರನ್‌ಗಳಿಂದ ಸೋತಿತು. 2019ರ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋತು ಹೊರ ಬಿದ್ದಿದ್ದೂ ಇದೇ ಗ್ರೇಟ್ ಕಿವೀಸ್ ವಿರುದ್ಧ.
ಆಕ್ಲೆಂಡ್ ಪಂದ್ಯದ ಪರಾಭವದೊಂದಿಗೆ ಏಕದಿನ ಸರಣಿ ಕೈಚೆಲ್ಲಿರುವ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಕೆಟ್ಟ ದಾಖಲೆಗೂ ಕಾರಣವಾಗಿದೆ.

ಉಲ್ಟಾ ಹೊಡೆದ ಯೋಜನೆ
ಭಾರತ ಚೇಸಿಂಗ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಗೆದ್ದ ದಾಖಲೆಯಿದೆ. ಇದೇ ಕಾರಣಕ್ಕೆ ಕೊಹ್ಲಿ ಪಡೆ, ಆಕ್ಲೆಂಡ್‌ನಲ್ಲೂ ಬೌಲಿಂಗ್ ಆಯ್ದುಕೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್‌ನಿಂದ ಮಾರ್ಟಿನ್ ಗಪ್ಟಿಲ್ 79, ಹೆನ್ರಿ ನಿಕೋಲ್ಸ್ 41, ರಾಸ್ ಟೇಲರ್ ಅಜೇಯ 73 ರನ್ ಸೇರಿಸಿ ಭಾರತಕ್ಕೆ ಸವಾಲಿನ ಮೊತ್ತ ನೀಡಲು ನೆರವಾದರು. ಕಿವೀಸ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 273 ರನ್ ಪೇರಿಸಿತ್ತು.

ಭಾರತದ ಬ್ಯಾಟಿಂಗ್ ವೈಫಲ್ಯ
ಎಂದಿನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ, ಶಿಖರ್ ಧವನ್ ತಂಡದಲ್ಲಿ ಇಲ್ಲದೆ ಹಿನ್ನಡೆಯಲ್ಲಿದ್ದ ಭಾರತ ಆಕ್ಲೆಂಡ್ ಚೇಸಿಂಗ್ ವೇಳೆ ಎಡವಿತ್ತು. ಪೃಥ್ವಿ ಶಾ 24, ನಾಯಕ ವಿರಾಟ್ ಕೊಹ್ಲಿ 15, ಶ್ರೇಯಸ್ ಐಯ್ಯರ್ 52, ರವೀಂದ್ರ ಜಡೇಜಾ 55, ಶಾರ್ದೂಲ್ ಠಾಕೂರ್ 18, ನವದೀಪ್ ಸೈನಿ 45 (49 ಎಸೆತ) ರನ್ ಕೊಡುಗೆಯಿಟ್ಟರು. ಕೊಹ್ಲಿ ಪಡೆ 48.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 251 ರನ್ ಪೇರಿಸಿ ತಲೆ ಬಾಗಿತು.

ತುಂಡಾಯ್ತು ಸರಣಿ ಜಯದ ಸಾಲು!
ಐಸಿಸಿ ವಿಶ್ವಕಪ್ 2019ರ ಬಳಿಕ ಭಾರತ ಒಟ್ಟು 12 ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಂಡಿದೆ. ಇದರಲ್ಲಿ 12 ಸರಣಿಗಳಲ್ಲೂ ಸೋಲು ಕಂಡಿರಲಿಲ್ಲ. ಈ 12 ಸರಣಿಗಳಲ್ಲಿ ಮೂರು ಟೆಸ್ಟ್ ಸರಣಿಗಳಲ್ಲಿ ಮೂರೂ ಗೆಲುವು, 3 ಏಕದಿನ ಸರಣಿಗಳಲ್ಲಿ ಮೂರರಲ್ಲೂ ಗೆಜಯ, 6 ಟಿ20ಐ ಸರಣಿಗಳಲ್ಲಿ 5 ಗೆಲುವು, 1 ಡ್ರಾ ಕಂಡಿತ್ತು. ಭಾರತದ ಸರಣಿ ಗೆಲುವಿನ ಸಾಲು ಕಿವೀಸ್ ವಿರುದ್ಧದ ಈ ಏಕದಿನ ಸರಣಿ ಸೋಲಿನ ಮೂಲಕ ತುಂಡಾಗಿದೆ.

ಕೆಟ್ಟ ದಾಖಲೆ ನಿರ್ಮಾಣ
ನ್ಯೂಜಿಲೆಂಡ್ ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳನ್ನು ಸೋತಿರುವ ಭಾರತ ಏಕದಿನದಲ್ಲಿ ಇನ್ನೊಂದು ಕೆಟ್ಟ ದಾಖಲೆ ನಿರ್ಮಾಣಕ್ಕೂ ಕಾರಣವಾಗಿದೆ. ಅತೀ ಹೆಚ್ಚು ಏಕದಿನ ಪಂದ್ಯಗಳನ್ನು ಸೋತ ವಿಶ್ವದ ತಂಡಗಳಲ್ಲಿ ಭಾರತ ಈಗ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಕೆಟ್ಟ ದಾಖಲೆ ಸಾಲಿನಲ್ಲಿ ಭಾರತ (423 ಪಂದ್ಯಗಳು), ಶ್ರೀಲಂಕಾ (421), ಪಾಕಿಸ್ತಾನ (413), ವೆಸ್ಟ್ ಇಂಡೀಸ್ (378), ನ್ಯೂಜಿಲೆಂಡ್ (373) ದೇಶಗಳಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications