ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಆರಂಭವಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಸೋಲಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ.
ಪುಣೆಯಲ್ಲಿ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಮುನ್ನಡೆಸುತ್ತಿರುವ ಭಾರತ ತಂಡ ಬೌಲಿಂಗ್ ದಾಳಿ ಆರಂಭಿಸಲಿದೆ.

ಪುಣೆ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಎರಡು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಕುತ್ತಿಗೆ ನೋವಿನಿಂದ ಚೇತರಿಸಿಕೊಂಡಿರುವ ಶುಭಮನ್ ಗಿಲ್ ತಂಡಕ್ಕೆ ವಾಪಾಸಾಗಿದ್ದಾರೆ. ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಎರಡನೇ ಬದಲಾವಣೆ ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಇದಲ್ಲದೆ, ವೇಗಿ ಮೊಹಮ್ಮದ್ ಸಿರಾಜ್ ಬದಲಿಗೂ ಬಾಂಗ್ಲಾದೇಶ ಟೆಸ್ಟ್ ಸರಣಿಯಲ್ಲಿ ಸಂಚಲನ ಮೂಡಿಸಿದ ಆಕಾಶ್ ದೀಪ್ ಅವರಿಗೆ ಅವಕಾಶ ನೀಡಲಾಗಿದೆ.
ಸರಣಿಯಲ್ಲಿ ಉಳಿಯಬೇಕಾದರೆ ಭಾರತ ಪುಣೆ ಟೆಸ್ಟ್ ಪಂದ್ಯವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಇದಾದ ಬಳಿಕ ಟೆಸ್ಟ್ ಸರಣಿ ಗೆಲ್ಲಬೇಕಾದರೆ ಮುಂಬೈನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವನ್ನೂ ಭಾರತ ಗೆಲ್ಲಲೇಬೇಕು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, ರೋಹಿತ್ ಪಡೆ ಹೆಸರಿನಲ್ಲಿ ವಿಶ್ವ ದಾಖಲೆ ಆಗಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಗೆಲುವು ತವರಿನಲ್ಲಿ ಭಾರತಕ್ಕೆ ಸತತ 19ನೇ ಟೆಸ್ಟ್ ಸರಣಿ ಜಯವಾಗಿರಲಿದೆ. ತವರಿನಲ್ಲಿ ಸತತ 19 ಟೆಸ್ಟ್ ಸರಣಿಗಳನ್ನು ಗೆಲ್ಲಲು ವಿಶ್ವದ ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ.
ಭಾರತ ತಂಡ ಕಳೆದ 12 ವರ್ಷಗಳಿಂದ ತವರಿನಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ. 2012ರ ನವೆಂಬರ್‌ನಲ್ಲಿ ಕೊನೆಯ ಬಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿತ್ತು. ಇದಾದ ನಂತರ ಭಾರತ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಸೋತಿಲ್ಲ. ತವರಿನಲ್ಲಿ ಕಳೆದ 54 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋತಿದ್ದು, 42 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. 7 ಟೆಸ್ಟ್ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಅಜಾಜ್ ಪಟೇಲ್, ವಿಲಿಯಂ ಒರೂರ್ಕೆ.