
ಮೊದಲ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಬಳಿಕ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಅದ್ಭುತ ರೀತಿಯಲ್ಲಿ ತಿರುಗಿ ಬಿದ್ದಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ನೇತೃತ್ವದ ದಕ್ಷಿಣ ಆಫ್ರಿಕಾ 198 ರನ್‌ಗಳ ಅಂತರದ ಭಾರೀ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ 1-1 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅತ್ಯಂತ ಹೀನಾಯ ಪ್ರದರ್ಶನ ನೀಡಿತ್ತು. ಕಿವೀಸ್ ನೆಲದಲ್ಲಿ ನೀಡಿದ ಈ ಪ್ರದರ್ಶನಕ್ಕೆ ಸಾಕಷ್ಟು ಟೀಕೆಯನ್ನು ಕೂಡ ಡೀನ್ ಎಲ್ಗರ್ ಪಡೆ ಎದುರಿಸಿತ್ತು. ಇನ್ನಿಂಗ್ಸ್ ಹಾಗೂ 276 ರನ್‌ಗಳ ಭಾರೀ ಅಂತರದಿಂದ ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗಕ್ಕೆ ದಕ್ಷಿಣ ಆಫ್ರಿಕಾ ಒಳಗಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಈ ಹೀನಾಯ ಸೋಲಿಗೆ ಭರ್ಜರಿಯಾಗಿಯೇ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ನಾಲ್ಕು ದಿನವೂ ಸಂಪೂರ್ಣ ಹಿಡಿತ ಸಾಧಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇ ದಿನದಂತ್ಯದಲ್ಲಿ ಗೆಲುವಿನ ಸನಿಹಕ್ಕೆ ಬಂದು ತಲುಪಿತ್ತು. ಅಂತಿಮ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಎದುರಾಳಿ ತಂಡದ ಆರು ವಿಕೆಟ್‌ಗಳನ್ನು ಕಬಳಿಸಿದರೆ ಗೆಲುವು ಸಾಧ್ಯವಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ ತಂಡ 94 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಂತಿಮ ದಿನದಾಟದಲ್ಲಿ ದಕ್ಷಿಣ ಆಪ್ರಿಕಾದ ಬೌಲಿಂಗ್ ಪಡೆ 227 ರನ್‌ಗಳಿಗೆ ನ್ಯೂಜಿಲೆಂಡ್ ಪಡೆಯನ್ನು ಸಂಪೂರ್ಣವಾಗಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ 198 ರನ್‌ಗಳ ಅಂತರದ ಭಾರೀ ಗೆಲುವು ತನ್ನದಾಗಿಸಿಕೊಂಡಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವು ಸಾಧಿಸಲು ನ್ಯೂಜಿಲೆಂಡ್ ತಂಡಕ್ಕೆ 426 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು ಪ್ರವಾಸಿ ಹರಿಣ ಪಡೆ. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆಘಾತದ ಮೇಲೆ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 6 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ 81 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯದಲ್ಲಿ 94 ರನ್‌ಗಳಿಸಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತ. ಅಂತಿಮ ದಿನ ಕೂಡ ಡೆವೋನ್ ಕಾನ್ವೆ 92 ರನ್‌ಗಳಿಸಿ ಕಿವೀಸ್ ಪರವಾಗಿ ಉತ್ತಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಟಾಮ್ ಬ್ಲಂಡಲ್ ಕೂಡ ಒಂದು ಹಂತದಲ್ಲಿ ಉತ್ತಮ ಬೆಂಬಲವನ್ನು ನೀಡಿದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪಡೆಯ ಹೋರಾಟ 227 ರನ್‌ಗಳಿಗೆ ಅಂತ್ಯವಾಯಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಸರೆಲ್ ಇರ್ವೀ ಅವರ ಶತಕದ ನೆರವಿನಿಂದ 364 ರನ್‌ಗಳ ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 293 ರನ್‌ಗಳಿಗೆ ಆಲೌಟ್ ಆಗಿ 71 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು. ಬೌಲಿಂಗ್‌ನಲ್ಲಿ ಕಗಿಸೋ ರಬಡಾ ಹಾಗೂ ಜಾನ್ಸನ್ ಭಯಾನಕ ಬೌಲಿಂಗ್ ದಾಳಿಯ ಮೂಲಕ ಮಿಂಚಿದರು. ರಬಡಾ 5 ವಿಕೆಟ್ ಪಡೆದರೆ ಜಾನ್ಸನ್ 4 ವಿಕೆಟ್ ಸಂಪಾದಿಸಿದರು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಪ್ರಿಕಾ ತಂಡ ವಿಕೆಟ್ ಕೀಪರ್ ವರ್ರಾಯ್ನೆ ಶತಕದ ನೆರವಿನೊಂದಿಗೆ 354 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಹೀಗಾಗಿ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ 426 ರನ್‌ಗಳನ್ನು ಬೆನ್ನಟ್ಟುವ ಬೃಹತ್ ಸವಾಲನ್ನು ಮುಂದಿಟ್ಟಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ದಕ್ಷಿಣ ಆಫ್ರಿಕಾ ಬೌಲರ್‌ಗಳು ಕಿವೀಸ್ ದಾಂಡಿಗರ ವಿರುದ್ಧ ಮೇಲುಗೈ ಸಾಧಿಸಿದರು.
ನ್ಯೂಜಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ
ಬೆಂಚ್: ಹಮಿಶ್ ರುದರ್ಫೋರ್ಡ್, ಕ್ಯಾಮ್ ಫ್ಲೆಚರ್, ಬ್ಲೇರ್ ಟಿಕ್ನರ್, ರಚಿನ್ ರವೀಂದ್ರ
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಲುಥೋ ಸಿಪಾಮ್ಲಾ
ಬೆಂಚ್: ಜುಬೇರ್ ಹಮ್ಜಾ, ಗ್ಲೆಂಟನ್ ಸ್ಟೌರ್ಮನ್, ಡುವಾನ್ ಒಲಿವಿಯರ್, ರಿಯಾನ್ ರಿಕೆಲ್ಟನ್, ಲುಂಗಿ ಎನ್ಗಿಡಿ, ಸೈಮನ್ ಹಾರ್ಮರ್