ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕ್ವೀನ್ಸ್‌ಟೌನ್‌ನ ಜಾನ್ ಡೇವಿಸ್ ಓವಲ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ. ಸರಣಿ ಮೊದಲ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ ಒಂದು ಗೆಲುವು ಸಾಧಿಸಿದ್ದು, ಇಂದು ಪಂದ್ಯ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ಎರಡೂ ತಂಡಗಳು ಸಜ್ಜಾಗಿವೆ.
ಸರಣಿಯ ಮೊದಲನೇ ಪಂದ್ಯ ಟೈನಲ್ಲಿ ಅಂತ್ಯವಾದರೂ ಸೂಪರ್ ಓವರ್ ನಲ್ಲಿ ಮಹೀಷ್ ತೀಕ್ಷಣಾ ಅದ್ಭುತ ಬೌಲಿಂಗ್ ನೆರವಿನಿಂದ ಶ್ರೀಲಂಕಾ ಸುಲಭದ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ತಿರುಗಿ ಬಿದ್ದ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು ಸಮಗಲಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಮುಖ ಆಟಗಾರರು ಇಲ್ಲದಿದ್ದರೂ ನ್ಯೂಜಿಲೆಂಡ್ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ.

ಏಕದಿನ ವಿಶ್ವಕಪ್‌ಗೆ ನೇರವಾಗಿ ಪ್ರವೇಶಿಸುವ ಅರ್ಹತೆ ಕಳೆದುಕೊಂಡಿರುವ ಶ್ರೀಲಂಕಾ, ಭಾರಿ ಮುಖಭಂಗ ಅನುಭವಿಸಿದೆ. ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಆಗಿದ್ದ ಲಂಕನ್ನರು ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ನಂತರ ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಕೂಡ ಸೋಲು ಕಂಡಿದ್ದರು. ನಂತರ ನ್ಯೂಜಿಲೆಂಡ್‌ಗೆ ಪ್ರವಾಸ ಮಾಡಿದ್ದು, ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋತಿದ್ದಾರೆ.
ಬೌಲರ್ ಗಳಿಗೆ ನೆರವು ನೀಡುವ ಪಿಚ್
ಕ್ವೀನ್ಸ್‌ಟೌನ್ ನಾಲ್ಕು ದೇಶೀಯ ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿಲ್ಲ, ಈ ಮೈದಾನದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 146 ಆಗಿದೆ. ಚೇಸಿಂಗ್ ಮಾಡುವ ತಂಡಗಳು ಈ ಮೈದಾನದಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿವೆ. ನಾಲ್ಕು ಟಿ20 ಪಂದ್ಯಗಳಲ್ಲಿ 170ಕ್ಕಿಂತ ಅಧಿಕ ರನ್ ದಾಖಲಾಗಿಲ್ಲ. ಇಲ್ಲಿ ಆಡಿರುವ ಏಳು ಏಕದಿನ ಪಂದ್ಯಗಳಲ್ಲಿ ಕೂಡ ಮೊದಲ ಇನ್ನಿಂಗ್ಸ್ ಸರಾಸರಿ ಮೊತ್ತ 189 ಆಗಿದೆ.

ಉಭಯ ತಂಡಗಳ ಆಡುವ ಬಳಗ
ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಕುಸಲ್ ಪೆರೆರಾ, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗಾ, ಮಹೀಶ್ ತೀಕ್ಷಣ, ಪ್ರಮೋದ್ ಮದುಶನ್, ಕಸುನ್ ರಜಿತ, ಲಹಿರು ಕುಮಾರ.
ನ್ಯೂಜಿಲೆಂಡ್ : ಚಾಡ್ ಬೋವ್ಸ್, ಟಿಮ್ ಸೀಫರ್ಟ್, ಟಾಮ್ ಲ್ಯಾಥಮ್ (ನಾಯಕ/ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಆಡಮ್ ಮಿಲ್ನೆ, ಹೆನ್ರಿ ಶಿಪ್ಲಿ, ಇಶ್ ಸೋಧಿ, ಬೆನ್ ಲಿಸ್ಟರ್.