ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವನತೆಯರು ಭರ್ಜರಿ ಗೆಲುವು ಕಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ.
ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು ನ್ಯೂಜಿಲೆಂಡ್ ತಂಡವನ್ನು 59 ರನ್‌ಗಳಿಂದ ಸೋಲಿಸಿದ್ದರು. ಇದೀಗ ಭಾರತ ತಂಡವನ್ನು ನ್ಯೂಜಿಲೆಂಡ್ 76 ರನ್‌ಗಳಿಂದ ಮಣಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್ ತಂಡ 2024ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದು, ಭಾರತದ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಟ ಪ್ರದರ್ಶಿಸಿದೆ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕಿ ಸೋಫಿ ಡಿವೈನ್ ಟಾಸ್ ಗೆದ್ದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮೊದಲು ಬೌಲಿಂಗ್ ಮಾಡಲು ಆಹ್ವಾನಿಸಿದರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಸುಜಿ ಬೇಟ್ಸ್ ಮತ್ತು ಜಾರ್ಜಿಯಾ ಪ್ಲಿಮ್ಮರ್ ಮೊದಲ ವಿಕೆಟ್‌ಗೆ 87 ರನ್ ಸೇರಿಸಿದರು. ಇಬ್ಬರೂ ಅಮೋಘ ಬ್ಯಾಟಿಂಗ್ ಮಾಡಿದರು. ಸುಜಿ ಬೇಟ್ಸ್ 58 ರನ್ ಮತ್ತು ಜಾರ್ಜಿಯಾ ಪ್ಲಿಮ್ಮರ್ 41 ರನ್ ಗಳಿಸಿ ಔಟಾದರು. ಇವರಲ್ಲದೆ ಮ್ಯಾಡಿ ಗ್ರೀನ್ ಕೂಡ 42 ರನ್ ಕೊಡುಗೆ ನೀಡಿದರು. ತಂಡದ ಪರ ನಾಯಕಿ ಸೋಫಿ ಡಿವೈನ್ ಅತಿ ಹೆಚ್ಚು ರನ್ ಗಳಿಸಿದರು. ಅವರು 86 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 79 ರನ್ ಬಾರಿಸಿದರು. ಭಾರತದ ಪರ ರಾಧಾ ಯಾದವ್ 4 ವಿಕೆಟ್ ಪಡೆದು ಮಿಂಚಿದರೆ, ದೀಪ್ತಿ ಶರ್ಮಾ 2, ಸೈಮಾ ಠಾಕೋರ್ ಹಾಗೂ ಪ್ರಿಯಾ ಮಿಶ್ರಾ ತಲಾ 1 ವಿಕೆಟ್ ಪಡೆದರು.
ನ್ಯೂಜಿಲೆಂಡ್ ನೀಡಿದ 260 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ಭಾರತದ ಟಾಪ್ ಆರ್ಡರ್ ಬ್ಯಾಟಿಂಗ್ ವಿಫಲವಾಯಿತು. ಭಾರತದ ಪರ ಸ್ಮೃತಿ ಮಂಧಾನ ಖಾತೆ ತರೆಯದೆ ಮೊದಲ ವಿಕೆಟ್ ಕಳೆದುಕೊಂಡರು.
ಇದಾದ ನಂತರ ಶೆಫಾಲಿ ಕೂಡ 11 ರನ್‌ಗಳಿಸಿ ಔಟಾದರು. ಯಾಸ್ತಿಕಾ ಭಾಟಿಯಾ 12 ರನ್, ನಾಯಕಿ ಹರ್ಮನ್‌ಪ್ರೀತ್ ಕೌರ್ 24, ಜೆಮಿಮಾ ರಾಡ್ರಿಗಸ್ 17, ತೇಜಲ್ ಹಸ್ಸಾಬ್ನಿಸ್ 15, ದೀಪ್ತಿ ಶರ್ಮಾ 15 ಮತ್ತು ಅರುಂಧತಿ ರೆಡ್ಡಿ ಕೇವಲ 2 ರನ್ ಕೊಡುಗೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ 108 ರನ್ ಗಳಿಗೆ ಟೀಮ್ ಇಂಡಿಯಾ 8 ವಿಕೆಟ್ ಕಳೆದುಕೊಂಡಿತ್ತು.
ಇದಾದ ನಂತರ ರಾಧಾ ಯಾದವ್ ಮತ್ತು ಸೈಮಾ ಠಾಕೋರ್ ಜೊತೆಗೂಡಿ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 9ನೇ ವಿಕೆಟ್‌ಗೆ 70 ರನ್ ಸೇರಿಸಿದರು. ಆದರೆ ಇಬ್ಬರೂ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಭಾರತ ಅಂತಿಮವಾಗಿ 183 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 76 ರನ್‌ಗಳಿಂದ ಸೋಲನುಭವಿಸಬೇಕಾಯಿತು. ನ್ಯೂಜಿಲೆಂಡ್ ಪರ ಲೀ ತಾಹುಹು ಮತ್ತು ಸೋಫಿ ಡಿವೈನ್ ತಲಾ 3 ವಿಕೆಟ್ ಪಡೆದರೆ, ಈಡನ್ ಕಾರ್ಸನ್ 2 ವಿಕೆಟ್ ಉರುಳಿಸಿದರು.
ಈ ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯವು ಅಕ್ಟೋಬರ್ 29 ರಂದು ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಗೆಲ್ಲುವ ತಂಡವು ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.