ತವರಿನಲ್ಲಿ ಭಾರತ ತಂಡವನ್ನು ನ್ಯೂಜಿಲೆಂಡ್ 3-0 ಅಂತರದಲ್ಲಿ ಸೋಲಿಸಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿದೆ. 24 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರವಾಸಿ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತವನ್ನು ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಮಾಡಿದೆ.
2000ರಲ್ಲಿ ಭಾರತ ತಂಡವನ್ನು ತವರಿನಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದಿಂದ ಸೋಲಿಸಿತ್ತು. ಈಗ ಮುಂಬೈನ ವಾಂಖೆಡೆ ಟೆಸ್ಟ್ ಪಂದ್ಯದಲ್ಲ ಟೀಮ್ ಇಂಡಿಯಾವನ್ನು ನ್ಯೂಜಿಲೆಂಡ್ 25 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದೆ.

ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಮೊದಲು ಬ್ಯಾಟಿಂಗ್ ಮಾಡಿದರು. ಕಿವೀಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್‌ಗಳನ್ನು ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 263 ರನ್ ಗಳಿಸಿ 28 ರನ್ ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪಡೆಯನ್ನು 174 ರನ್‌ಗಳಿಗೆ ಭಾರತ ಆಲೌಟ್ ಮಾಡಿತು. 147 ರನ್‌ಗಳ ಗುರಿ ಪಡೆದ ಭಾರತ 29.1 ಓವರ್‌ಗಳಲ್ಲಿ 121 ರನ್‌ಗಳಿಗೆ ಸರ್ವಪತನವಾಯಿತು. ಇದರೊಂದಿಗೆ ನ್ಯೂಜಿಲೆಂಡ್ 25 ರನ್‌ಗಳಿಂದ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ನೀಡದ 147 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 29 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡ ತಾಳ್ಮೆಯುತ ಆಟವಾಡುವ ಮೂಲಕ ಭಾರತಕ್ಕೆ ಆಸರೆಯಾದರು. ಭರ್ಜರಿ ಬ್ಯಾಟಿಂಗ್ ಮಾಡಿದ ಪಂತ್ ನ್ಯೂಜಿಲೆಂಡ್ ತಂಡವನ್ನು ಕಾಡಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಂತ್ 57 ಎಸೆತಗಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 64 ರನ್ ಹೊಡೆದು ಭಾರತ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಆದರೆ ಅಜಾಜ್ ಪಟೇಲ್ ಅವರು ಪಂತ್ ಔಟ್ ಮಾಡುವಲ್ಲಿ ಯಶಸ್ವಿಯಾದರು.