ಮುಂಬರುವ ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಸಹ ಸಿದ್ಧತೆಗಳನ್ನು ಪ್ರಾರಂಭಿಸಿವೆ. ಆದರೆ ಇದೀಗ ಎಲ್ಲಾ ಫ್ರಾಂಚೈಸಿಗಳು ಆಟಗಾರರ ಉಳಿಸಿಕೊಳ್ಳುವಿಕೆಯ ಬಗ್ಗೆ ಮಾತ್ರ ಯೋಚಿಸುತ್ತಿವೆ. ಏಕೆಂದರೆ ಈ ಪ್ರಕ್ರಿಯೆಗೆ ಮುಂಚೆ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31ರ ಒಳಗೆ ಸಲ್ಲಿಸಬೇಕಾಗಿದೆ.
ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಳ್ಳಬಹುದಾದ ಆಟಗಾರರ ಬಗ್ಗೆ ಕ್ರಿಕೆಟ್ ಪಂಡಿತರು ಚರ್ಚೆ ನಡೆಸುತ್ತಿದ್ದಾರೆ. ಜೊತೆಗೆ ಮೆಗಾ ಹರಾಜಿನಲ್ಲಿ ಯಾವ ಆಟಗಾರ ಯಾವ ತಂಡವನ್ನು ಸೇರಬಹುದು ಎನ್ನುವುದು ಕೂಡ ಕುತೂಹಲ ಮೂಡಿಸಿದೆ. ಟೀಮ್ ಇಂಡಿಯಾದ ಈ ಇಬ್ಬರು ಯುವ ಆಟಗಾರರ ಮೇಲೆ ಹಣದ ಸುರಿಮಳೆ ಆಗುವ ನಿರೀಕ್ಷೆ ಹೆಚ್ಚಿದೆ.

ಈ ಇಬ್ಬರು ಸ್ಟಾರ್ ಯುವ ಆಟಗಾರರು ಪ್ರಸ್ತುತ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ 2024ರ ಟೂರ್ನಿಯಲ್ಲಿ ಈ ಯುವ ಆಟಗಾರರ ನೀಡಿದ ಪ್ರದರ್ಶನದ ಆಧಾರದ ಮೇಲೆ ಟೀಮ್ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಎರಡು ಕೈಯಿಂದ ಬಾಚಿಕೊಂಡ ಈ ಆಟಗಾರರು ತಮ್ಮ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿದ್ದಾರೆ. ಈ ಆಟಗಾರರು ಬೇರೆ ಯಾರು ಅಲ್ಲ, ಯುವ ಸ್ಟಾರ್ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ವೇಗದ ಬೌಲರ್ ಮಯಾಂಕ್ ಯಾದವ್.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ 22 ವರ್ಷದ ವೇಗಿ ಮಯಾಂಕ್ ಯಾದವ್ ಟಿ20 ಪಾದಾರ್ಪಣೆ ಮಾಡಿದ್ದು, ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದರ ಆಧಾರದ ಮೇಲೆ ಮಯಾಂಕ್ ಅವರಿಗೆ ಹಣದ ಸುರಿಮಳೆ ಆಗುವ ಸಾಧ್ಯತೆಯಿದೆ.
ಮತ್ತೊಂದೆಡೆ ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನವೇ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಉಳಿಸಿಕೊಳ್ಳಬಹುದು. ಐಪಿಎಲ್ ನಿಯಮಗಳ ಪ್ರಕಾರ, ಮಯಾಂಕ್ ಯಾದವ್ ಈಗಾಗಲೇ ಟೀಮ್ ಇಂಡಿಯಾ ಪರ ಆಡುತ್ತಿದ್ದು, 'ಅನ್‌ಕ್ಯಾಪ್ಡ್ ಪ್ಲೇಯರ್' ನಿಂದ 'ಕ್ಯಾಪ್ಡ್ ಪ್ಲೇಯರ್' ಅವರನ್ನು ಪಟ್ಟಿಗೆ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಅವರು ಭಾರೀ ಮೊತ್ತ ಪಡೆಯುವಬಹುದು. ಎಲ್‌ಎಸ್‌ಜಿ ಒಂದು ವೇಳೆ ಮಯಾಂಕ್ ಯಾದವ್ ಅವರನ್ನು ಉಳಿಸಿಕೊಂಡರೆ ಕನಿಷ್ಠ 11 ಕೋಟಿ ರೂ. ನೀಡುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳಿವೆ.
ಬಾಂಗ್ಲಾದೇಶದ ವಿರುದ್ಧ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎರಡನೇ ಭಾರತ ತಂಡದ ಆಟಗಾರ ನಿತೀಶ್ ಕುಮಾರ್ ರೆಡ್ಡಿ. ಅವರು ಕೂಡ ಈಗ 'ಅನ್‌ಕ್ಯಾಪ್ಡ್ ಪ್ಲೇಯರ್' ನಿಂದ 'ಕ್ಯಾಪ್ಡ್ ಆಟಗಾರ' ಪಟ್ಟಿಗೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಅವರ ಮೇಲೂ ಹಣವನ್ನು ಹೆಚ್ಚು ಸುರಿಯಬಹುದು. ಬಾಂಗ್ಲಾದೇಶ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಸಂಚಲನ ಮೂಡಿಸಿದ್ದಾರೆ.
ಬ್ಯಾಟಿಂಗ್‌ನಲ್ಲಿ ನಿತೀಶ್ 34 ಎಸೆತಗಳಲ್ಲಿ 74 ರನ್ ಗಳಿಸಿದರೆ, ಬೌಲಿಂಗ್‌ನಲ್ಲಿ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಆದರೆ ಇಂತಹ ಉದಯೋನ್ಮುಖ ಆಲ್‌ರೌಂಡರ್ ಅನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಉಳಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿಲ್ಲ. ಏಕೆಂದರೆ ಅವರು ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ತಮ್ಮ ಮೊದಲ ಮೂರು ರಿಟೈನ್ ಆಟಗಾರರಾಗಿ ನೋಡುತ್ತಿದೆ. ಒಂದು ವೇಳೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಹೈದರಾಬಾದ್ ಉಳಿಸಿಕೊಳ್ಳದಿದ್ದರೆ, ಉಳಿದ ಫ್ರಾಂಚೈಸಿ ತಂಡಗಳು ಮೆಗಾ ಹರಾಜಿನಲ್ಲಿ ಅವರನ್ನು ಭಾರೀ ಮೊತ್ತ ಬಿಡ್ ಮಾಡಲು ಮುಂದಾಗುವ ಸಾಧ್ಯತೆ ಹೆಚ್ಚಿದೆ.