ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ಸ್ಟಾರ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಬ್ಯಾಟಿಂಗ್ ಮತ್ತು ಬಾಲಿಂಗ್ ಎರಡರಲ್ಲೂ ಸಂಚಲನ ಮೂಡಿಸಿದ್ದರು. ಅವರು ಭಾರತ ತಂಡಕ್ಕೆ ಆಸರೆಯಾಗುವ ಮೂಲಕ ಮಿಂಚಿದರು. ವೇಗದ ಬೌಲಿಂಗ್ ಆಲ್-ರೌಂಡರ್ ಆಗಿರುವ ನಿತೀಶ್ ಕುಮಾರ್ ರೆಡ್ಡಿ ಶತಕವನ್ನೂ ಬಾರಿಸಿ ಎಲ್ಲರ ಚಿತ್ತ ಕದ್ದಿದ್ದರು.
ಇದೀಗ ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ಮನೆಗೆ ಮರಳಿರುವ ನಿತೀಶ್ ಕುಮಾರ್ ರೆಡ್ಡಿ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ. ಶ್ರದ್ಧೆ, ಭಕ್ತಿಯಿಂದ ತಿರುಪತಿ ಬೆಟ್ಟದ ಮೆಟ್ಟಿಲುಗಳನ್ನು ಮೊಣಕಾಲುಗಳಿಂದ ಹತ್ತು ಮೂಲಕ ನಿತೀಶ್ ಕುಮಾರ್ ಹರಕೆ ತೀರಿಸಿದ್ದಾರೆ.

ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಸ್ಮರಣೀಯ ಟೆಸ್ಟ್ ಸರಣಿಯ ನಂತರ ನಿತೀಶ್ ಕುಮಾರ್ ರೆಡ್ಡಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ತಮ್ಮ ತವರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿತ್ತು. ಇದಾದ ನಂತರ ಸೋಮವಾರ ಅವರು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ತಮ್ಮ ಮೊಣಕಾಲುಗಳಿಂದ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ಹಿಂದೆ ನಿತೀಶ್ ಕುಮಾರ್ ರೆಡ್ಡಿ ಮನೆಗೆ ಹಿಂತಿರುಗಿದ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ತೆರೆದ ಜೀಪಿನ ಮುಂದೆ ನಿತೀಶ್ ಕುಳಿತ್ತಿದ್ದರು. ಅಲ್ಲದೆ, ಅವರ ತಂದೆ ಮುತ್ಯಾಲು ರೆಡ್ಡಿ ಕೂಡ ಈ ವೇಳೆ ಇದ್ದರು. ನಿತೀಶ್ ಅವರ ಬೆಂಗಾವಲು ವಾಹನಗಳು ವಿಶಾಖಪಟ್ಟಣಂನ ಅವರ ಹುಟ್ಟೂರಾದ ಗಜುವಾಕಾದ ಬೀದಿಗಳಲ್ಲಿ ಸಾಗಿದವು. ಅಲ್ಲಿನ ಜನರು ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಿದ್ದರು.
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಪ್ರದರ್ಶನ ನೀಡಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಪರ ಎಲ್ಲಾ 5 ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಈ ಸರಣಿಯಲ್ಲಿ ವರು ಒಂದು ಶತಕದ ಸಹಾಯದಿಂದ 298 ರನ್ ಗಳಿಸಿದರು. ಈ ಮೂಲಕ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಇದಲ್ಲದೆ, ಅವರು ಸಿಡ್ನಿ ಮೈದಾನದಲ್ಲಿ ಆಡಿದ ಐದನೇ ಮತ್ತು ಕೊನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದ ಎರಡು ವಿಕೆಟ್ ಸೇರಿದಂತೆ 5 ವಿಕೆಟ್‌ಗಳನ್ನು ಕಬಳಿಸಿದರು.
ನಿತೀಶ್ ಕುಮಾರ್ ರೆಡ್ಡಿ ಅವರ ಆಟವನ್ನು ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಹಾರ್ದಿಕ್ ಪಾಂಡ್ಯ ಅವರಿಗೆ ಪೈಪೋಟಿ ನೀಡಲು ನಿತೀಶ್ ಕುಮಾರ್ ರೆಡ್ಡಿ ತಯಾರಾಗುತ್ತಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ಗಲ್ಲಿಗಳಲ್ಲಿ ಕೇಳಿ ಬರುತ್ತಿವೆ. ನಿತೀಶ್ ಕುಮಾರ್ ರೆಡ್ಡಿ ಜಬಾವ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ಸಂಕಷ್ಟದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.