ಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾ

ನವದೆಹಲಿ, ಜೂನ್ 1: ಎರಡು ದಶಕಗಳ ಗಡಿಪಾರಿನ ಬಳಿಕ ಯುಕೆಯಿಂದ ಬುಕ್ಕಿ ಸಂಜೀವ್ ಚಾವ್ಲಾ ಅವರನ್ನು ಈ ವರ್ಷ ಫೆಬ್ರವರಿಯಲ್ಲಿ ಭಾರತಕ್ಕೆ ಕರೆತರಲಾಗಿತ್ತು. ಇದೇ ಸಂಜೀವ್ ಚಾವ್ಲಾ, ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿ ಆಘಾತಕಾರಿ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ನಮ್ಮೆದುರು ನಡೆಯುವ ಯಾವ ಕ್ರಿಕೆಟ್ ಪಂದ್ಯವೂ ನ್ಯಾಯೋಚಿತವಲ್ಲ, ಎಲ್ಲವೂ ಫಿಕ್ಸ್ಡ್. ಪ್ರತೀ ಪಂದ್ಯಗಳೂ ಭೂಗತ ಲೋಕದವರಿಂದ ನಿಯಂತ್ರಿಸಲ್ಪಡುತ್ತದೆ ಎಂದಿದ್ದಾರೆ.
2000ರಲ್ಲಿ ಹ್ಯಾನ್ಸಿ ಕ್ರೊಂಜೆ ನೇತೃತ್ವದ ದಕ್ಷಿಣ ಆಫ್ರಿಕಾದ ತಂಡವು ಉಪಖಂಡಕ್ಕೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಭಾರತ ಅತಿದೊಡ್ಡ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಾಕ್ಷಿಯಾಗಿತ್ತು. ಈ ಹಗರಣದ ಒಂದು ಭಾಗವೆಂದು ಎಂದು ಬುಕ್ಕಿ ಸಂಜೀವ್ ಚಾವ್ಲಾ ಅವರನ್ನು ಆರೋಪಿಸಲಾಗಿದೆ.
ತನಿಖೆ ವೇಳೆ ಸಂಜೀವ್ ಚಾವ್ಲಾ ಬಾಯ್ಬಿಟ್ಟಿರುವ ಕುತೂಹಲಕಾರಿ ವಿಚಾರಗಳು ಇಲ್ಲಿವೆ.

ಅತಿದೊಡ್ಡ ಭ್ರಷ್ಟಾಚಾರ
ಈಗ ನಿಧನರಾಗಿರುವ ಪ್ರೋಟಿಯಸ್ ನಾಯಕ ಕ್ರೊಂಜೆ ಜೊತೆಗೆ ಸಂಜೀವ್ ಚಾವ್ಲಾ ಅವರ ಸಂಭಾಷಣೆಯ ಧ್ವನಿಮುದ್ರಣಗಳು ಭಾರತೀಯ ಕ್ರಿಕೆಟ್‌ನಲ್ಲಿ ನಡೆದ ಅತಿದೊಡ್ಡ ಭ್ರಷ್ಟಾಚಾರದ ಹಗರಣವೆಂಬುದನ್ನು ಬಹಿರಂಗಪಡಿಸಿದವು. ಸುಮಾರು 20 ವರ್ಷಗಳ ಬಳಿಕ ಹುಡುಕಾಡಿದ ಪೊಲೀಸರು ಈಗ 50 ವರ್ಷದವರಾಗಿರುವ ಚಾವ್ಲಾ ಅವರನ್ನು ಯುಕೆಯಿಂದ ಭಾರತಕ್ಕೆ ಕರೆತಂದಿದ್ದರು.

ಎಲ್ಲಾ ಮ್ಯಾಚ್‌ಗಳೂ ಫಿಕ್ಸ್ಡ್
ವಿಚಾರಣೆ ನಡೆಯುತ್ತಿರುವಾಗ ಚಾವ್ಲಾ ಆಘಾತಕಾರಿ ವಿಚಾರವನ್ನು ಹೇಳಿಕೊಂಡಿದ್ದಾರೆ. 'ಯಾವ ಕ್ರಿಕೆಟ್ ಪಂದ್ಯವೂ ನ್ಯಾಯಯುತವಾಗಿ ನಡೆಯುತ್ತಿಲ್ಲ. ಜನ ನೋಡುವ ಎಲ್ಲಾ ಮ್ಯಾಚ್‌ಗಳೂ ಫಿಕ್ಸ್ಡ್,' ಎಂದು ಚಾವ್ಲಾ ಹೇಳಿಕೊಂಡಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಅಂಡರ್‌ವರ್ಲ್ಡ್ ಕೈವಾಡ
ಫಿಕ್ಸಿಂಗ್‌ನಲ್ಲಿ ತಾನು ಭಾಗಿಯಾಗಿದ್ದನ್ನು ವಿವರಿಸಿದ ಸಂಜೀವ್, 'ಒಂದು ದೊಡ್ಡ ಅಂಡರ್ವರ್ಲ್ಡ್ ಮಾಫಿಯಾ, ನಡೆಯುವ ಕ್ರಿಕೆಟ್ ಪಂದ್ಯಗಳ ನಿಯಂತ್ರಣ ಹೊಂದಿರುತ್ತದೆ. ಈಗಾಗಲೇ ಯಾವುದೋ ಒಬ್ಬ ನಿರ್ದೇಶಕ ನಿರ್ದೇಶಿಸಿರುವಂತ ಸಿನಿಮಾದ ರೀತಿಯಲ್ಲೇ ಈ ಫಿಕ್ಸಿಂಗ್ ಮಾಫಿಯಾ ಇರುತ್ತದೆ,' ಎಂದಿದ್ದಾರೆ.

ಲಂಡನ್ ಮೂಲದ ಬುಕ್ ಮೇಕರ್
ಲಂಡನ್ ಮೂಲದ ಬುಕ್ ಮೇಕರ್ ಆಗಿರುವ, ನವದೆಹಲಿಯಲ್ಲಿ ಜನಿಸಿರುವ ಚಾವ್ಲಾ, ಬೇರೆ ಬೇರೆ ಸಂದರ್ಭಗಳಲ್ಲಿ ಪಂದ್ಯಗಳ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಅಂಡರ್‌ವರ್ಲ್ಡ್ ಮಾಫಿಯಾದ ಬಗ್ಗೆ ಮಾತನಾಡುತ್ತ ಚಾವ್ಲಾ, ತನ್ನ ಜೊತೆ ಕೆಲಸ ಮಾಡಿದವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲು ನಿರಾಕರಿಸಿದ್ದಾರೆ.

ಬಾಯ್ಬಿಟ್ಟರೆ ಕೊಲ್ಲುತ್ತಾರೆ
'ಫಿಕ್ಸಿಂಗ್‌ನಲ್ಲಿ ಡೊಡ್ಡ ಅಂಡರ್‌ವರ್ಲ್ಡ್ ಮಾಫಿಯಾ ತೊಡಗಿಕೊಂಡಿದೆ. ಇದು ಬಹಳ ಅಪಾಯಕಾರಿಯಾಗಿದೆ. ಏನಾದರೂ ವಿಚಾರ ಬಾಯ್ಬಿಟ್ಟರೆ ಅವರನ್ನು ಕೊಲ್ಲಲಾಗುತ್ತದೆ,' ಎಂದು ಚಾವ್ಲಾ ಹೇಳಿದ್ದಾರೆ. ತನ್ನ ಹಳೆ ಸ್ನೇಹಿತರಾದ ಕ್ರಿಶನ್ ಕುಮಾರ್, ರಾಜೇಶ್ ಕಾಲ್ರ ಮತ್ತು ಸುನಿಲ್ ದರಾ ಕೂಡ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂದು ಸಂಜೀವ್ ಬಾಯ್ಬಿಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications