
ಆಗಸ್ಟ್ 18ರಿಂದ ಟ್ರೆನಿಡಾಡ್ ಆ್ಯಂಡ್ ಟೊಬ್ಯಾಗೋದಲ್ಲಿ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಕೊರೊನಾ ವೈರಸ್‌ನಿಂದಾಗಿ ಕ್ರಿಕೆಟ್ ಸ್ತಬ್ಧವಾಗಿ ಪುನಾರಂಭದ ಬಳಿಕದ ಮೊದಲ ಲೀಗ್ ಕ್ರಿಕೆಟ್ ಇದಾಗಿರಲಿದೆ. ಆದರೆ ಈ ಖ್ಯಾತ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದಿಂದ ಏಕೈಕ ಆಟಗಾರ ಪಾಲ್ಗೊಳ್ಳಲಿದ್ದಾರೆ.
ಹೌದು ಇಮ್ರಾನ್ ತಾಹಿರ್ ಮಾತ್ರವೇ ಈ ಬಾರಿಯ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗನಾಗಿರಲಿದ್ದಾರೆ. ಅದಕ್ಕೆ ಕಾರಣ ದಕ್ಷಿಣ ಆಫ್ರಿಕಾದಲ್ಲಿನ ಲಾಕ್‌ಡೌನ್. ಕೊರೊನ ಆವೈರಸ್‌ನ ಕಾರಣದಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಹೀಗಾಗಿ ವಿದೇಶಿ ವಿಮಾನಯಾನವೂ ಸಂಪೂರ್ಣವಾಗಿ ಸ್ಥಗಿತವಾಗಿದೆ.
ಆದರೆ ಇಮ್ರಾನ್ ತಾಹೀರ್ ಈಗ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದಾರೆ. ಮೂಲತಃ ಪಾಕಿಸ್ತಾನದವರಾದ ತಾಹಿರ್ ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಈ ಟೂರ್ನಿ ಅಂತಿಮ ಹಂತದಲ್ಲಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿದ ಕಾರಣ ಪಾಕಿಸ್ತಾನದಲ್ಲೇ ಕುಟುಂಬಸ್ಥರ ಜೊತೆಗೆ ಕಾಲ ಕಳೆದು ಈಗ ಟ್ರೆನಿಡಾಡ್ ಆ್ಯಂಡ್ ಟೊಬ್ಯಾಗೋಗೆ ಪ್ರಯಾಣ ಬೆಳೆಸಿದ್ದಾರೆ.
ಈಗ ಕ್ರಿಕೆಟ್ ಪುನಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ತಾಹಿರ್ ಪಾಕಿಸ್ತಾನದಿಂದ ತೆರಳಲು ಅವಕಾಶವಿದೆ. ಹೀಗಾಗಿ ಕೆರಿಬಿಯನ್ ಲೀಗ್‌ನಲ್ಲಿ ತಾಹಿರ್ ಪಾಲ್ಗೊಳ್ಳುವುದು ಖಚಿತವಾಗಿದೆ. ಕ್ರಿಕ್ ಇನ್ಪೋ ವರದಿ ಮಾಡಿದ ಪ್ರಕಾರ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರು 14 ದಿನಗಳ ಕ್ವಾರಂಟೈನ್ ಪೂರೈಸಬೇಕಾದ ಕಾರಣದಿಂದಾಗಿ ಟ್ರಿನಿಡಾಡ್ ಆ್ಯಂಡ್ ಟೊಬ್ಯಾಗೋಗೆ ಆಗಸ್ಟ್ 1ರ ಮುಂಚಿತವಾಗಿ ತಲುಪಬೇಕಿದೆ.
ಮತ್ತೊಂದೆಡೆ ಐಪಿಎಲ್‌ಗೂ ದಿನಗಣನೆ ಆರಂಭವಾಗಿದ್ದು ಈ ಟೂರ್ನಿಯಲ್ಲೂ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಪಾಲ್ಗೊಳ್ಳುವಿಕೆ ಮೇಲೆ ಕರಿ ನೆರಳು ಬಿದ್ದಿದೆ. ಐಪಿಎಲ್‌ನಲ್ಲಿ 10 ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಆಡಲು ಒಪ್ಪಂದವನ್ನು ಮಾಡಿಕೊಂಡಿದ್ದು ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.