ಉತ್ತರಪ್ರದೇಶ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭರವಸೆಯ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರು ಅಂತಿಮವಾಗಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್ ಪಂದ್ಯಾವಳಿಗೆ ಭಾರತ ರಾಷ್ಟ್ರೀಯ ತಂಡದಿಂದ ಮೊದಲ ಕರೆಯನ್ನು ಪಡೆದರು.
2022 ಮತ್ತು 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಯಲ್ಲಿ ಬ್ಯಾಟ್‌ನೊಂದಿಗೆ ಅದ್ಭುತವಾದ ಪ್ರದರ್ಶನದ ನಂತರ, ರಿಂಕು ಸಿಂಗ್ ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ನೀಲಿ ಜೆರ್ಸಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಿಂಕು ಸಿಂಗ್ ತನ್ನ ಕ್ರಿಕೆಟ್ ಆರಾಧ್ಯ ಆಟಗಾರ ಒಳಗೊಂಡಂತೆ ಹಲವಾರು ವಿಷಯಗಳ ಮೇಲೆ ಮಾತನಾಡಿದ್ದಾರೆ. 25 ವರ್ಷದ ರಿಂಕು ಸಿಂಗ್ ಭಾರತದ ಮಾಜಿ ಬ್ಯಾಟರ್ ಸುರೇಶ್ ರೈನಾ ಅವರ ಆಟವನ್ನು ಯಾವಾಗಲೂ ನೋಡುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.
ರಿಂಕು ಸಿಂಗ್ ಅವರು ಭಾರತದ ಮಾಜಿ ಬ್ಯಾಟರ್ ಮತ್ತು ಸಿಎಸ್‌ಕೆ ಸ್ಟಾರ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಸುರೇಶ್ ರೈನಾ ಅವರು ನನ್ನ ಆಟವನ್ನು ಸುಧಾರಿಸಲು ಆಗಾಗ್ಗೆ ಸಲಹೆಗಳನ್ನು ನೀಡಿದ್ದಾರೆ ಮತ್ತು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೆಂಬಲಕ್ಕೆ ರಿಂಕು ನೆನಪಿಸಿಕೊಂಡಿದ್ದಾರೆ.
"ಸುರೇಶ್ ರೈನಾ ನನ್ನ ಆದರ್ಶ ಆಟಗಾರನಾಗಿದ್ದಾರೆ. ನಾನು ಅವರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ, ರೈನಾ ಐಪಿಎಲ್ ಕಿಂಗ್. ಅವರು ನನ್ನೊಂದಿಗೆ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರು ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ," ಎಂದರು.

"ಇನ್ನು ಹರ್ಭಜನ್ ಸಿಂಗ್ ಕೂಡ ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ. ಇಂತಹ ದೊಡ್ಡ ಆಟಗಾರರು ನಮ್ಮಂತಹ ಯುವ ಆಟಗಾರರ ಬಗ್ಗೆ ಮಾತನಾಡುವಾಗ, ಅದು ನಮ್ಮನ್ನು ಉತ್ತಮ ಪ್ರದರ್ಶನ ನೀಡಲು ಪ್ರೇರೇಪಿಸುತ್ತದೆ," ಎಂದು ರಿಂಕು ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದರು.
ರಿಂಕು ಸಿಂಗ್ 2023ರ ಐಪಿಎಲ್‌ನಲ್ಲಿ ವೈಯಕ್ತಿಕವಾಗಿ ಅದ್ಭುತ ಋತುವನ್ನು ಕಂಡರು. ತಂಡಗಳ ದೃಷ್ಟಿಕೋನದಿಂದ ಕೆಕೆಆರ್‌ನ ನಿರಾಶಾದಾಯಕ ಅಭಿಯಾನದಲ್ಲಿ 474 ರನ್‌ಗಳನ್ನು ಬಾರಿಸಿದರು.
ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಿರಿಯರ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ ಮತ್ತು ರುತುರಾಜ್ ಗಾಯಕ್ವಾಡ್ ನಾಯಕತ್ವದ ತಂಡವನ್ನು ಆಯ್ಕೆ ಮಾಡಲಾಗಿದೆ.
ಭಾರತ ತಂಡವು ಕಳೆದ ಎರಡು ಏಷ್ಯನ್ ಗೇಮ್ಸ್‌ಗಳಲ್ಲಿ ಕ್ರಿಕೆಟ್ ತಂಡವನ್ನು ಕಳಿಸಿರಲಿಲ್ಲ. ಇತರ ಪ್ರಮುಖ ತಂಡಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ಆಯಾ ಪಂದ್ಯಾವಳಿಗೆ ತಮ್ಮ ಎರಡನೇ ತಂಡಗಳನ್ನು ಕಳುಹಿಸಿದ್ದವು.
ರುತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್)
ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಸಾಯಿ ಸುದರ್ಶನ್.