ಭಾರತ ಯುವ ಕ್ರಿಕೆಟ್ ತಂಡವು 2023ರಲ್ಲಿ ಆಡಿದ ಆರು ಟಿ20 ಸರಣಿಗಳಲ್ಲಿ ಐದರಲ್ಲಿ ಗೆಲುವು ಸಾಧಿಸುವ ಮೂಲಕ ಚುಟುಕು ಪಂದ್ಯಗಳಲ್ಲಿ ಗಮನಾರ್ಹ ವರ್ಷವನ್ನು ಹೊಂದಿದೆ.
2023ರ ಜನವರಿಯಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 2-1 ಅಂತರದ ಸರಣಿ ಗೆಲುವಿನೊಂದಿಗೆ ಈ ವರ್ಷವನ್ನು ಪ್ರಾರಂಭಿಸಿತು ಮತ್ತು ನಂತರ, ನ್ಯೂಜಿಲೆಂಡ್ ವಿರುದ್ಧ ಅದೇ 2-1 ಅಂತರದಲ್ಲಿ ಗೆದ್ದು ಬೀಗಿತು.

ಆದರೆ, ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅವರದೇ ನೆಲದಲ್ಲಿ ಭಾರತ ತಂಡವು 2-3 ಅಂತರದಿಂದ ಸರಣಿಯನ್ನು ಸೋತಿತು. ಇದನ್ನು ಹೊರತುಪಡಿಸಿ 2023ರಲ್ಲಿ ಉಳಿದೆಲ್ಲ ಸರಣಿ ಗೆಲುವು ಸಾಧಿಸಿದೆ.
ಭಾರತೀಯ ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಡೀ ವರ್ಷದಲ್ಲಿ ಒಂದೇ ಒಂದು ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳಲ್ಲದ ಕಾರಣ, 2023ರಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಯುವ ಆಟಗಾರರನ್ನು ಕಣಕ್ಕಿಳಿಸಿ ಪರೀಕ್ಷಿಸಿತು.
ಹೀಗಾಗಿ, 2023ರಲ್ಲಿ ಟಿ20 ಪಂದ್ಯಗಳಿಂದ ಭಾರತ ತಂಡದ ಕೆಲವು ಉದಯೋನ್ಮುಖ ಸೂಪರ್‌ಸ್ಟಾರ್‌ಗಳು ಹೆಚ್ಚು ಶುಲ್ಕ ಗಳಿಸಿದ್ದಾರೆ.

ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರು 2023ರಲ್ಲಿ ಭಾರತ ತಂಡಕ್ಕಾಗಿ 19 ಪಂದ್ಯಗಳನ್ನು ಆಡಿದ್ದು, ಇತರ ಭಾರತೀಯ ಆಟಗಾರರಿಗಿಂತ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಈ ಸ್ವರೂಪದಲ್ಲಿ ಅತಿ ಹೆಚ್ಚು ಶುಲ್ಕ ಗಳಿಸಿದ ಆಟಗಾರನಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವಾಗಿ ಪಾವತಿಸುತ್ತದೆ. 2023ರಲ್ಲಿ 19 ಪಂದ್ಯಗಳನ್ನಾಡಿದ ಅರ್ಶ್‌ದೀಪ್ ಸಿಂಗ್ ಟಿ20 ಮೂಲಕ ಒಟ್ಟು 57 ಲಕ್ಷ ರೂಪಾಯಿ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನವನ್ನು ಭಾರತ ತಂಡದ ಹೊಸ ಟಿ20 ನಾಯಕ ಸೂರ್ಯಕುಮಾರ್ ಯಾದವ್ ತೆಗೆದುಕೊಂಡಿದ್ದಾರೆ. ಅವರು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದರು ಮತ್ತು ಸರಣಿಯನ್ನು 4-1 ಅಂತರದಲ್ಲಿ ಗೆಲ್ಲಿಸುವಲ್ಲಿ ಸಫಲರಾದರು.
ಸೂರ್ಯಕುಮಾರ್ ಯಾದವ್ 2023ರಲ್ಲಿ ಒಟ್ಟು 16 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಅವರ ಒಟ್ಟು ಪಂದ್ಯಗಳ ಶುಲ್ಕ 48 ಲಕ್ಷ ರೂಪಾಯಿಗಳನ್ನು ಜೇಬಿಗಿಳಿಸಿದ್ದಾರೆ.
ಇದೇ ವೇಳೆ ಮೂರನೇ ಸ್ಥಾನವನ್ನು ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್ ಮತ್ತು ತಿಲಕ್ ವರ್ಮಾ ಅವರು ತಲಾ 13 ಪಂದ್ಯಗಳನ್ನು ಆಡಿದ್ದಾರೆ ಮತ್ತು ತಲಾ 39 ಲಕ್ಷ ರೂಪಾಯಿ ಗಳಿಸಿದ್ದಾರೆ.
ಮತ್ತೊಂದೆಡೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಮತ್ತು ಶುಭ್ಮನ್ ಗಿಲ್ ಅವರು 11 ಪಂದ್ಯಗಳನ್ನು ಆಡಿದ್ದು, ತಲಾ 33 ಲಕ್ಷ ರೂಪಾಯಿ ಶುಲ್ಕ ಗಳಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಗಮನಾರ್ಹವಾಗಿ, ಭಾರತ ತಂಡವು 2023ರಲ್ಲಿ ಒಟ್ಟು 21 ಟಿ20 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ 14 ಪಂದ್ಯಗಳನ್ನು ಗೆದ್ದಿದೆ ಮತ್ತು ಆರು ಪಂದ್ಯಗಳಲ್ಲಿ ಸೋಲು ಕಂಡಿದೆ.
2023ರ ಅಕ್ಟೋಬರ್‌ನಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 2023ರ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದರು.
ಇದೇ ವೇಳೆ, ಭಾರತ ತಂಡವು ಡಿಸೆಂಬರ್ 10ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ವರ್ಷದ ಕೊನೆಯ ಟಿ20 ಸರಣಿಯನ್ನು ಆಡಲಿದ್ದಾರೆ. ಅಲ್ಲಿ ಸೂರ್ಯಕುಮಾರ್ ಯಾದವ್ ಮೂರು ಪಂದ್ಯಗಳಲ್ಲಿ ತಮ್ಮ ನಾಯಕತ್ವದ ಕರ್ತವ್ಯವನ್ನು ಮುಂದುವರಿಸಲಿದ್ದಾರೆ.
1. ಅರ್ಶ್‌ದೀಪ್ ಸಿಂಗ್ - 57 ಲಕ್ಷ ರೂಪಾಯಿ
2. ಸೂರ್ಯಕುಮಾರ್ ಯಾದವ್ - 48 ಲಕ್ಷ ರೂಪಾಯಿ
3. ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್, ತಿಲಕ್ ವರ್ಮ- 39 ಲಕ್ಷ ರೂಪಾಯಿ
4. ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್, ಶುಭ್ಮನ್ ಗಿಲ್ - 33 ಲಕ್ಷ ರೂಪಾಯಿ
5. ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ - 30 ಲಕ್ಷ ರೂಪಾಯಿ