ಸರಣಿ ಗೆದ್ದ ನ್ಯೂಜಿಲೆಂಡ್ ಇತಿಹಾಸ: ವಿರಾಟ್ ಏಕಾಂಗಿ ಹೋರಾಟ ವ್ಯರ್ಥ
ಇಂದೋರ್: ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ 41 ರನ್‌ಗಳಿಂದ ನಿರ್ಣಾಯಕ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಮೂಲಕ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಕಿವೀಸ್ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ತನ್ನದಾಗಿಸಿಕೊಂಡಿದೆ.
ನ್ಯೂಜಿಲೆಂಡ್ ತಂಡಕ್ಕೆ ಶಾಕ್ ನೀಡಲು ವಿರಾಟ್ ಕೊಹ್ಲಿ ಒಂದು ಬದಿಯಲ್ಲಿ ಕ್ರೀಸ್ ಕಚ್ಚಿ ನಿಂತುಕೊಂಡಿದ್ದರು. ಇವರಿಗೆ ಇನ್ನೊಂದು ತುದಿಯಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದರು. ಪರಿಣಾಮ ದೊಡ್ಡ ಮೊತ್ತವನ್ನು ಬೆನ್ನಟ್ಟುವ ಜವಾಬ್ದಾರಿ ಹಾಗೂ ಒತ್ತಡ ವಿರಾಟ್ ಅವರ ಮೇಲೆ ಬಿದ್ದಿತು. ಈ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ವಿರಾಟ್, ಸೋಲಿನಲ್ಲಿ ಮಿಂಚಿದರು.

ಟೀಮ್ ಇಂಡಿಯಾದ ಮೊತ್ತ 71 ರನ್ ಆಗುವಷ್ಟರಲ್ಲಿ, ರೋಹಿತ್ ಶರ್ಮಾ (11), ನಾಯಕ ಶುಭಮನ್ ಗಿಲ್ (23), ಶ್ರೇಯಸ್ ಅಯ್ಯರ್ (3), ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ (1) ರನ್‌ಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಈ ಹಂತದಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ, ವಿರಾಟ್ ಕೊಹ್ಲಿ ಜೋಡಿ ಆಧಾರವಾಯಿತು. ಈ ಜೋಡಿ 88 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ನಿತೀಶ್ ಕುಮಾರ್ ಕುಮಾರ್ ರೆಡ್ಡಿ 2 ಬೌಂಡರಿ, 2 ಸಿಕ್ಸರ್ ನೆರವಿನಿಂದ 53 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಹರ್ಷಿತ್ ರಾಣಾ ಮ್ಯಾಜಿಕ್
ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. 7ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜೊತೆಗೂಡಿದ ಆಲ್‌ರೌಂಡರ್ ಹರ್ಷಿತ್ ರಾಣಾ ತಮ್ಮ ಬ್ಯಾಟಿಂಗ್ ಕ್ಷಮತೆಯನ್ನು ತೋರಿಸಿದರು. ಇವರ ದೊಡ್ಡ ಸಿಕ್ಸರ್‌ಗಳನ್ನು, ಬೌಂಡರಿಗಳನ್ನು ಬಾರಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಇವರು 43 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿದ್ದಾಗ ಪೆವಿಲಿಯನ್ ಸೇರಿದರು.
ವಿರಾಟ್ ಶತಕ
37 ವರ್ಷದ ವಿರಾಟ್ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಇವರು 311ನೇ ಏಕದಿನ ಪಂದ್ಯದಲ್ಲಿ 54ನೇ ಶತಕ ಬಾರಿಸಿದರು. ಈ ಮೂಲಕ ವಿರಾಟ್ ದೊಡ್ಡ ದಾಖಲೆಯನ್ನು ಬರೆದರು. ಕಿವೀಸ್ ವಿರುದ್ಧ ಏಳನೆ ಶತಕ ಬಾರಿಸಿ ದಾಖಲೆ ಬರೆದರು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ತಮ್ಮದಾಗಿಸಿಕೊಂಡರು. ವಿರಾಟ್ 108 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ 124 ರನ್ ಬಾರಿಸಿ ರನ್ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ ಔಟ್ ಆದರು.
ಅಂತಿಮವಾಗಿ ಭಾರತ 46 ಓವರ್‌ಗಳಲ್ಲಿ 296 ರನ್ ಸೇರಿಸಿ ಆಲೌಟ್ ಆಯಿತು. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಭಾರತದಲ್ಲಿ ಮೊದಲ ಸರಣಿ ಗೆಲುವಿನ ನಗೆ ಬೀರಿದೆ. ನ್ಯೂಜಿಲೆಂಡ್ ಪರ ಝಾಕ್ ಫೌಲ್ಕ್ಸ್, ಕ್ರಿಸ್ಟಿಯನ್ ಕ್ಲಾರ್ಕ್ ತಲಾ ಮೂರು ವಿಕೆಟ್ ಪಡೆದರೆ, ಜೇಡನ್ ಲೆನಾಕ್ಸ್ 2 ವಿಕೆಟ್ ಉರುಳಿಸಿದರು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ವಿಲ್ ಯಂಗ್ (30) ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಡ್ಯಾರಿಲ್ ಮಿಚಲ್ ಹಾಗೂ ಗ್ಲೇನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. 4ನೇ ವಿಕೆಟ್‌ಗೆ ಮಿಚಲ್, ಫಿಲಿಪ್ಸ್ ಜೊತೆಗೂಡಿ 219 ರನ್ ಸೇರಿಸಿತು. ಡ್ಯಾರಿಲ್ ಮಿಚೆಲ್ 137, ಗ್ಲೇನ್ ಫಿಲಿಪ್ಸ್ 106 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 337 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications