ದ.ಆಫ್ರಿಕಾ vs ನ್ಯೂಜಿಲೆಂಡ್: ವಿಲ್ ಯಂಗ್ ಹಿಡಿದ ಅದ್ಭುತ ಕ್ಯಾಚ್ ನೋಡಿ ಬೆರಗಾದ ಪ್ರೇಕ್ಷಕ

ಒಂದೆಡೆ ಮಾರ್ಚ್ 4ರಿಂದ ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಟೆಸ್ಟ್ ಸರಣಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಕೂಡ ಸದ್ದು ಮಾಡುತ್ತಿದೆ. ಹೌದು, ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕಿವೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ.
ಇತ್ತಂಡಗಳ ನಡುವಿನ ಈ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯದಲ್ಲಿ ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾ ವಿರುದ್ಧ 276 ರನ್‌ಗಳ ಭರ್ಜರಿ ಇನ್ನಿಂಗ್ಸ್ ಜಯ ಸಾಧಿಸಿತ್ತು. ಹೀಗೆ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ ಮುನ್ನಡೆಯನ್ನು ಕಾಯ್ದುಕೊಂಡಿರುವ ನ್ಯೂಜಿಲೆಂಡ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದೆ. ನ್ಯೂಜಿಲೆಂಡ್‌ನ ಕ್ರಿಸ್ಟ್ ಚರ್ಚ್ ಹಾಗ್ಲೆ ಓವಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ನ್ಯೂಜಿಲೆಂಡ್ ತಂಡದ ಆಟಗಾರ ವಿಲ್ ಯಂಗ್ ಅದ್ಭುತವಾದ ಕ್ಯಾಚ್ ಹಿಡಿಯುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಪಂದ್ಯದ ನಾಲ್ಕನೇ ದಿನದಾಟದಂದು ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ನಡೆಸಿತ್ತು. ಈ ವೇಳೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಮಾರ್ಕೋ ಜನ್ಸೆನ್ ಭರ್ಜರಿ ಹೊಡೆತವೊಂದನ್ನು ಬಾರಿಸಿದ್ದರು. ಮಾರ್ಕೋ ಜನ್ಸೆನ್ ಬಾರಿಸಿದ ಈ ಹೊಡೆತಕ್ಕೆ ಚೆಂಡು ವೇಗವಾಗಿ ಬೌಂಡರಿಯತ್ತ ಮುನ್ನುಗ್ಗಿತ್ತು. ಆದರೆ ಕ್ಷಣಮಾತ್ರದಲ್ಲಿ ಮಿಂಚಿನಂತೆ ಎಗರಿದ ನ್ಯೂಜಿಲೆಂಡ್ ತಂಡದ ಆಟಗಾರ ವಿಲ್ ಯಂಗ್ ಚೆಂಡನ್ನು ಹಿಡಿಯುವುದರ ಮೂಲಕ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ಬೆರಗಾಗುವಂತೆ ಮಾಡಿದರು. ಸದ್ಯ ವಿಲ್ ಯಂಗ್ ಅವರ ಈ ಕ್ಯಾಚ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಈ ವರ್ಷದ ಅತ್ಯುತ್ತಮ ಕ್ಯಾಚ್ ಎಂದು ಹೊಗಳುತ್ತಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ದಕ್ಷಿಣ ಆಫ್ರಿಕಾ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಮೊದಲನೇ ಇನ್ನಿಂಗ್ಸ್‌ನಲ್ಲಿ 364 ರನ್‌ಗಳಿಗೆ ಆಲ್ ಔಟ್ ಆಗಿತ್ತು. ನಂತರ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ 293 ರನ್‌ಗಳಿಗೆ ಆಲ್ ಔಟ್ ಆಗಿ ಹಿನ್ನಡೆಯನ್ನು ಅನುಭವಿಸಿತು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿ 71 ರನ್‌ಗಳ ಮುನ್ನಡೆಯನ್ನು ಕಾಯ್ದುಕೊಂಡ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಪ್ರವಾಸಿ ದಕ್ಷಿಣ ಆಫ್ರಿಕಾ 426 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಇನ್ನು ದಕ್ಷಿಣ ಆಫ್ರಿಕಾ ನೀಡಿದ ಈ ಕಠಿಣ ಗುರಿಯನ್ನು ಬೆನ್ನತ್ತಿರುವ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು ನಾಲ್ಕನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 94 ರನ್ ಕಲೆಹಾಕಿದೆ. ಈ ಮೂಲಕ ನ್ಯೂಜಿಲೆಂಡ್ ಗೆಲ್ಲಲು ಇನ್ನೂ 332 ರನ್ ಬಾರಿಸಬೇಕಾದ ಅಗತ್ಯತೆಯನ್ನು ಹೊಂದಿದ್ದು ಐದನೇ ದಿನದಾಟದಲ್ಲಿ ವಿಕೆಟ್ ಕಳೆದುಕೊಳ್ಳದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುತ್ತಾ ಅಥವಾ ದಕ್ಷಿಣ ಆಫ್ರಿಕಾ ಬೌಲಿಂಗ್ ಎದುರು ಮಂಕಾಗಿ ಪಂದ್ಯವನ್ನು ಕೈಚೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications