NZ Vs SL 2nd Test: ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 58 ರನ್‌ಗಳ ಜಯ: ಸರಣಿ ವೈಟ್ ವಾಶ್ ಮಾಡಿದ ನ್ಯೂಜಿಲೆಂಡ್

ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನಲ್ಲಿ ರೋಚಕ ಗೆಲುವು ಕಂಡ ನ್ಯೂಜಿಲೆಂಡ್ ಎರಡನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 58 ರನ್‌ಗಳ ಜಯ ಸಾಧಿಸಿದೆ. ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ವೈಟ್‌ವಾಶ್ ಮಾಡುವಲ್ಲಿ ಯಶಸ್ವಿಯಾಗಿದೆ.
ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್‌ಗಳಿಗೆ ಆಲೌಟ್ ಆಗಿದ್ದ ಶ್ರೀಲಂಕಾ ಮೇಲೆ ನ್ಯೂಜಿಲೆಂಡ್ ಫಾಲೋ ಆನ್ ಹೇರಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟ ನೀಡಿದರೂ ಶ್ರೀಲಂಕಾ ಪಡೆಗೆ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದ್ದ ಲಂಕಾ ಪಡೆ 4ನೇ ದಿನ 358 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ದಿಮುತ್ ಕರುಣರತ್ನೆ, ಕುಶಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್ ಮತ್ತು ಧನಂಜಯ ಡಿಸಿಲ್ವ ಉತ್ತಮ ಇನ್ನಿಂಗ್ಸ್ ಆಡಿದರೂ ಶ್ರೀಲಂಕಾ ಇನ್ನಿಂಗ್ಸ್ ಮುನ್ನಡೆ ಪಡೆಯಲು ಸಾಧ್ಯವಾಗಲಿಲ್ಲ. ಕರುಣರತ್ನೆ 50, ಕುಶಾಲ್ ಮೆಂಡಿಸ್ 51, ದಿನೇಶ್ ಚಾಂಡಿಮಾಲ್ 62, ಧನಂಜಯ ಡಿ ಸಿಲ್ವ 98 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ನಾಯಕ ಟಿಮ್ ಸೌಥಿ ಮತ್ತು ಬ್ಲೈರ್ ಟಿಕ್ನರ್ ತಲಾ ಮೂರು ವಿಕೆಟ್ ಪಡೆದರೆ, ಮೈಕೆಲ್ ಬ್ರೇಸ್‌ವೆಲ್ 2 ವಿಕೆಟ್ ಪಡೆದರು, ಮ್ಯಾಟ್ ಹೆನ್ರಿ ಮತ್ತು ಡೌಗ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಧನಂಜಯ ಡಿಸಿಲ್ವ ಹೋರಾಟ ವ್ಯರ್ಥ
ಧನಂಜಯ ಡಿ ಸಿಲ್ವ ನ್ಯೂಜಿಲೆಂಡ್ ವಿರುದ್ಧ ಉತ್ತಮ ಹೋರಾಟ ನೀಡಿದರು. 185 ಎಸೆತಗಳನ್ನು ಎದುರಿಸಿದ ಅವರು, 12 ಬೌಂಡರಿ, 1 ಸಿಕ್ಸರ್ ಸಹಿತ 98 ರನ್ ಗಳಿಸಿ ಔಟಾಗುವ ಮೂಲಕ ಕೇವಲ 2 ರನ್‌ಗಳಿಂದ ಶತಕವನ್ನು ತಪ್ಪಿಸಿಕೊಂಡರು. ದಿನೇಶ್ ಚಾಂಡಿಮಾಲ್ ಕೂಡ 62 ರನ್ ಗಳಿಸಿ ಧನಂಜಯಗೆ ಉತ್ತಮವಾಗಿ ಜೊತೆಯಾದರು.
ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 580 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲಸ್ ಭರ್ಜರಿ ದ್ವಿಶತಕ ಸಿಡಿಸಿ ನ್ಯೂಜಿಲೆಂಡ್ ದೊಡ್ಡ ಮೊತ್ತ ಕಲೆಹಾಕಲು ಕಾರಣವಾದರು.

ಕೇನ್ ವಿಲಿಯಮ್ಸನ್ ಸರಣಿ ಶ್ರೇಷ್ಠ ಆಟಗಾರ
ದ್ವಿಶತಕ ಗಳಿಸಿ ಮಿಂಚಿದ ಹೆನ್ರಿ ನಿಕೋಲಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕೇನ್ ವಿಲಿಯಮ್ಸನ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಟೆಸ್ಟ್ ಸರಣಿ ಬಳಿಕ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.
ಈ ಸೋಲಿನ ಮೂಲಕ 2021-2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಶ್ರೀಲಂಕಾ ಫೈನಲ್ ಹಾದಿ ಕೊನೆಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು, ಜೂನ್ 7ರಿಂದ 11 ರವರೆಗೆ ಇಂಗ್ಲೆಂಡ್‌ನ ಓವಲ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ನ್ಯೂಜಿಲೆಂಡ್ ಹಾಲಿ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿ ಗೆದ್ದಿರುವ ತಂಡವಾಗಿದ್ದು, ಈ ಬಾರಿ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications