ನ್ಯೂಜಿಲೆಂಡ್ ಸದ್ಯ ಜಿಂಬಾಬ್ವೆ ಪ್ರವಾಸದಲ್ಲಿದೆ. ಈ ವೇಳೆ ಆತಿಥೇಯ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ತಂಡದ ಸ್ಟಾರ್ ಆಟಗಾರರು ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ. ಸ್ಟಾರ್ ಆಟಗಾರರ ಭರ್ಜರಿ ಆಟದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದೆ.
ಶುಕ್ರವಾರ ಮೊದಲ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 1 ವಿಕೆಟ್‌ಗೆ 174 ರನ್‌ಗಳಿಂದ ಆಟ ಮುಂದುವರೆಸಿತು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜಾಕೋಬ್ ಡಫ್ಫಿ (36 ರನ್) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಮೂರನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್, ಡೆವೊನ್ ಕಾನ್ವೇ ಜೋಡಿ ಜಿಂಬಾಬ್ವೆ ತಂಡಕ್ಕೆ ಕಾಟ ನೀಡಿತು. ಈ ಜೋಡಿಯ ಅಮೋಘ ಆಟಕ್ಕೆ ಬ್ರೇಕ್ ಹಾಕುವಲ್ಲಿ ಜಿಂಬಾಬ್ವೆ ಬೌಲರ್‌ಗಳು ವಿಫಲರಾದರು. ಈ ಜೋಡಿ ಮೂರನೇ ವಿಕೆಟ್‌ಗೆ 182 ಎಸೆತಗಳಲ್ಲಿ 110 ರನ್‌ಗಳ ಜೊತೆಯಾಟವನ್ನು ನಿಡಿ ಆಧಾರವಾಯಿತು. ಮೊದಲ ದಿನದಾಟದಲ್ಲಿ ಅಜೇಯ 79 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಡೆವೊನ್ ಕಾನ್ವೇ ಎರಡನೇ ದಿನದಾಟದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 245 ಎಸೆತಗಳಲ್ಲಿ 18 ಬೌಂಡರಿ ಸಹಾಯದಿಂದ 153 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಡೆವೊನ್ ಕಾನ್ವೇ ತಮ್ಮ ವೃತ್ತಿ ಜೀವನದ ಐದನೇ ಶತಕ ಬಾರಿಸಿದರು.
ಇನ್ನು ನಾಲ್ಕನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್, ರಾಚಿನ್ ರವೀಂದ್ರ ಜೋಡಿ ಜಿಂಬಾಬ್ವೆ ತಂಡಡದ ಬೌಲರ್‌ಗಳನ್ನು ಕಾಡಿತು. ಈ ಜೋಡಿ ಸಮಯೋಚಿತ ಆಟವಾಡಿತು. ಹೆನ್ರಿ ನಿಕೋಲ್ಸ್ ತಮ್ಮ ನೈಜ್ಯ ಆಟವನ್ನು ಆಡಿ ತಮ್ಮ ವೃತ್ತಿ ಜೀವನದ 10ನೇ ಶತಕ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಅಂತಿಮವಾಗಿ ನ್ಯೂಜಿಲೆಂಡ್ ಡ್ರಿಂಕ್ಸ್ ವಿರಾಮದ ವೇಳೆಗೆ 3 ವಿಕೆಟ್‌ಗೆ 504 ರನ್ ಸಿಡಿಸಿದೆ. ಚಹಾ ವಿರಾಮದ ಬಳಿಕ ಬ್ಯಾಟ್ ಮಾಡಿದ ರಾಚಿನ್ ರವೀಂದ್ರ ಸಹ ತಮ್ಮ ಟೆಸ್ಟ್ ವೃತ್ತಿ ಜೀವನದ 3ನೇ ಶತಕ ಬಾರಿಸಿದರು.
ನಾಲ್ಕನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್, ರಾಚಿನ್ ರವೀಂದ್ರ ಜೋಡಿ ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದೆ. ಈ ಜೋಡಿ ಏಕದಿನ ಶೈಲಿಯಲ್ಲಿ ಬ್ಯಾಟ್ ಮಾಡಿ 285 ಎಸೆತಗಳಲ್ಲಿ ಅಜೇಯ 256 ರನ್‌ಗಳನ್ನು ಕಲೆ ಹಾಕಿ ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ರಾಚಿನ್ ರವೀಂದ್ರ ಪಕ್ಕಾ ಓಡಿಐ ಫಾರ್ಮೆಟ್ ರೀತಿ ಬ್ಯಾಟ್ ಮಾಡಿದ್ದಾರೆ. ಇವರು 139 ಎಸೆತಗಳಲ್ಲಿ 21 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 165 ರನ್ ಸಿಡಿಸಿದರು. ಹೆನ್ರಿ ನಿಕೋಲ್ಸ್ 245 ಎಸೆತಗಳಲ್ಲಿ 15 ಬೌಂಡರಿ ಸಹಾಯದಿಂದ ಅಜೇಯ 150 ರನ್ ಸಿಡಿಸಿದ್ದಾರೆ. ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 601 ರನ್ ಕಲೆ ಹಾಕಿದ್ದು, 476 ರನ್‌ಗಳ ಭಾರೀ ಮುನ್ನಡೆಯನ್ನು ಸಾಧಿಸಿದೆ.