ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಎಲ್ಲಾ ತಂಡಗಳು ಕೂಡ ಸಿದ್ಧತೆ ನಡೆಸುತ್ತಿದೆ. ಏಷ್ಯಾದ ರಾಷ್ಟ್ರಗಳು ಏಷ್ಯಾಕಪ್‌ನಲ್ಲಿ ಸೆಣೆಸಾಡುವ ಮೂಲಕ ಕೊನೆಯ ಹಂತದ ಸಿದ್ಧತೆ ನಡೆಸಿದರೆ ಉಳಿದ ರಾಷ್ಟ್ರಗಳು ಭಾರತಕ್ಕೆ ಪೂರಕವಾದ ವಾರಾವರಣದಲ್ಲಿ ಕೊನೆಯ ಹಂತದ ಸರಣಿಗಳನ್ನು ಆಯೋಜಿಸಿಕೊಂಡು ಪ್ರತಿಷ್ಠಿತ ಟೂರ್ನಿಗೆ ಸಜ್ಜಾಗುತ್ತಿದೆ. ಇನ್ನು ಈ ಸಂದರ್ಭದಲ್ಲಿ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು? ಯಾವ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಬಹುದು ಎಂದೆಲ್ಲಾ ಕುತೂಹಲಗಳು ಇದ್ದೇ ಇದೆ.
ಈ ರೀತಿಯ ಕುತೂಹಲ ಅಭಿಮಾನಿಗಳಿಗೆ ಮಾತ್ರವಲ್ಲ ಕ್ರಿಕೆಟ್ ಪಂಡಿತರು ಮಾಜಿ ಕ್ರಿಕೆಟಿಗರಿಗೂ ಇದೆ. ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಮಾಜಿ ಆಟಗಾರ ಜಾಕ್ ಕ್ಯಾಲಿಸ್ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸುವ ಆಟಗಾರ ಯಾರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರನಿಂದ ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ರನ್ ಮಳೆ ಹರಿದುಬರಲಿದೆ ಎಂದು ಜಾಕ್ ಕ್ಯಾಲಿಸ್ ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ಜಾಕ್ ಕ್ಯಾಲಿಸ್ ಹೇಳಿದ್ದು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಜೋಸ್ ಬಟ್ಲರ್ ಬಗ್ಗೆ. ಅದ್ಭುತ ಫಾರ್ಮ್‌ನಲ್ಲಿರುವ ಜೋಸ್ ಬಟ್ಲರ್ ಭಾರತದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸುವ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಹೇಳಿಕೆ ನೀಡಿದ್ದಾರೆ.
ಜೋಸ್ ಬಟ್ಲರ್ ಇಂಗ್ಲೆಂಡ್ ತಂಡ ವಿಶ್ವಕಪ್ ತನ್ನಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂಗ್ಲೆಂಡ್ ತಂಡಕ್ಕೆ ನಿರ್ಣಾಯಕ ಆಟಗಾರನಾಗಲಿದ್ದಾರೆ. ಕಳೆದ ವರ್ಷ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿಯೂ ಜೋಸ್ ಬಟ್ಲರ್ ಮಹತ್ವದ ಪಾತ್ರವಹಿಸಿದ್ದರು. ಅಲ್ಲದೆ ಐಪಿಎಲ್‌ನಲ್ಲಿಯೂ ಬಟ್ಲರ್ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದು ಭಾರತದ ವಾತಾವರಣಕ್ಕೆ ಉತ್ತಮವಾಗಿ ಹೊಂದಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಆಡಿದ 96 ಪಂದ್ಯಗಳ 148.32ರಷ್ಟು ಅದ್ಭುತ ಸ್ಟ್ರೈಕ್-ರೇಟ್‌ನೊಂದಿಗೆ 3223 ರನ್ ಗಳಿಸಿದ್ದಾರೆ. 2022ರ ಆವೃತ್ತಿ ಜೋಸ್ ಬಟ್ಲರ್ ಅವರ ಅತ್ಯುತ್ತಮ ಆವೃತ್ತಿಯಾಗಿದ್ದು 17 ಪಂದ್ಯಗಳಿಂದ 57.53 ಸರಾಸರಿಯಲ್ಲಿ 863 ರನ್ ಗಳಿಸಿ ಅಬ್ಬರಿಸಿದ್ದರು. ಇದೊಂದೇ ಆವೃತ್ತಿಯಲ್ಲಿ ಬಟ್ಲರ್ ನಾಲ್ಕು ಶತಕಗಳನ್ನು ಬಾರಿಸಿದ್ದರು.
ಹಾಗಿದ್ದರೂ ಜೋಸ್ ಬಟ್ಲರ್ ಅವರ ಭಾರತದಲ್ಲಿ ಏಕದಿನ ಮಾದರಿಯ ದಾಖಲೆ ಉತ್ತಮವಾಗಿಲ್ಲ. ಆಡಿರುವ 8 ಪಂದ್ಯಗಳಲ್ಲಿ ಜೋಸ್ ಬಟ್ಲರ್ ಗಳಿಸಿದ್ದು 11ರ ಸರಾಸರಿಯಲ್ಲಿ ಕೇವಲ 83 ರನ್ ಮಾತ್ರ. ಆದರೆ ಜಾಕ್ ಕ್ಯಾಲಿಸ್ ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಜೋಸ್ ಬಟ್ಲರ್ ಭಾರತದಲ್ಲಿ ರನ್‌ಮಳೆ ಹರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
"ನನ್ನ ಪ್ರಕಾರ ಈ ಬಾರಿಯ ವಿಶ್ವಕಪ್‌ನಲ್ಲಿ ಜೋಸ್ ಬಟ್ಲರ್ ಸತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಆತ ಭಾರತದ ವಾತಾರಣಕ್ಕೆ ಒಗ್ಗಿಕೊಂಡಿದ್ದಾರೆ. ಟೂರ್ನಿಯಲ್ಲಿ ಅತ್ಯಂತ ವಿಶೇಷ ಪ್ರದರ್ಶನ ನೀಡುವವರ ಪೈಕಿ ಜೋಸ್ ಬಟ್ಲರ್ ಕೂಡ ಒಬ್ಬತರಾಗಿರಲಿದ್ದಾರೆ" ಎಂದು ಜಾಕ್ ಕ್ಯಾಲಿಸ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.