World cup 2023: ಟೀಮ್ ಇಂಡಿಯಾ ಫೈನಲ್ ಸೋಲಿಗೆ ಕಾರಣ ತಿಳಿಸಿದ ಐಸಿಸಿ
ಭಾರತ ತಂಡ ತವರಿನಲ್ಲಿ ನಡೆದ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿತ್ತು. ಅಲ್ಲದೆ ಸತತ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಫೈನಲ್ ಹಂತವನ್ನು ಪ್ರವೇಶಿಸಿತ್ತು. ಭಾರತ ಮೂರನೇ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ಕ್ರಿಕೆಟ್ ಪಂಡಿತರೂ ಸಹ ಭವಿಷ್ಯ ನುಡಿದಿದ್ದರು.
ಆದರೆ, ನವೆಂಬರ್ 19 ಆ ದಿನ ಭಾರತದ ಪರವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ಮೈಚಳಿ ಬಿಟ್ಟು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪ್ಲೇಯರ್ಸ್ ಫೈನಲ್ ಪಂದ್ಯದಲ್ಲಿ ಮಕಾಡೆ ಮಲಗಿದರು. ಆಸೀಸ್ ಬೌಲರ್‌ಗಳ ರಣತಂತ್ರಕ್ಕೆ ಸಿಲುಕಿ ಪದರಾಡಿದರು. ಬೌಂಡರಿ, ಸಿಕ್ಸರ್‌ಗಳನ್ನು ಕಾಣದೆ ಅಭಿಮಾನಿಗಳು ಸಹ ನಿರಾಸೆ ಪಟ್ಟರು.

ವಿಶ್ವಕಪ್ ಮುಗಿದು ಸುಮಾರು 19 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಟೀಮ್ ಇಂಡಿಯಾ ಫೈನಲ್ ಸೋಲಿಗೆ ಕಾರಣವನ್ನು ಹುಡುಕಿದೆ. ನಿಜಕ್ಕೂ ಈ ಕಾರಣ ಟೀಮ್ ಇಂಡಿಯಾದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಈಗ ದೊಡ್ಡ ವರದಿಯೊಂದು ಹೊರಬಿದ್ದಿದ್ದು, ಆಸ್ಟ್ರೇಲಿಯ ವಿರುದ್ಧ ಟೀಂ ಇಂಡಿಯಾ ಫೈನಲ್ ಪಂದ್ಯ ಆಡಿದ ಪಿಚ್‌ಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ಸರಾಸರಿ' ರೇಟಿಂಗ್ ನೀಡಿದೆ ಎಂದು ಹೇಳಲಾಗಿದೆ. ಭಾರತದ ಸೋಲಿಗೆ ಪಿಚ್ ಕಾರಣ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ಈ ಮೊದಲೇ ಆರೋಪಿಸಿದ್ದರು ಎಂದು ಹಿಂದಿನ ವರದಿಗಳು ಹೇಳಿದ್ದವು.
'ಟೈಮ್ಸ್ ಆಫ್ ಇಂಡಿಯಾ' ಪ್ರಕಾರ, ಐಸಿಸಿ ಐದು ವಿಶ್ವಕಪ್ ಪಂದ್ಯಗಳ ಪಿಚ್‌ಗಳಿಗೆ ಸರಾಸರಿ ರೇಟಿಂಗ್ ನೀಡಿದೆ. ಇದರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯವೂ ಸೇರಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆದಿತ್ತು. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 240 ರನ್‌ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ ಈ ಗುರಿಯನ್ನು ಬೆನ್ನಟ್ಟಿ ಆರನೇ ಬಾರಿ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.
ಕೋಚ್ ರಾಹುಲ್ ದ್ರಾವಿಡ್ ಕೂಡ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಫೈನಲ್ ಪಂದ್ಯ ಸೋತಿದ್ದಕ್ಕೆ ಪಿಚ್ ಮೇಲೆ ಆರೋಪ ಮಾಡಿದ್ದರು. ವರದಿಗಳ ಪ್ರಕಾರ, ನಿರೀಕ್ಷೆಯಂತೆ ತಿರುವು ಸಿಗದ ಕಾರಣ ನಾವು ಸೋತಿದ್ದೇವೆ ಎಂದು ಮುಖ್ಯ ಕೋಚ್ ಹೇಳಿದ್ದರು. ಬೌಲ್ ಟರ್ನ್ ಆಗಿದ್ದರೆ ನಾವು ಗೆಲ್ಲುತ್ತಿದ್ದೆವು. ಈ ತಂತ್ರದಿಂದ ನಾವು ಮೊದಲ 10 ಪಂದ್ಯಗಳನ್ನು ಗೆದ್ದಿದ್ದೇವೆ, ಆದರೆ ಅದು ಫೈನಲ್‌ನಲ್ಲಿ ಫಲ ನೀಡಲಿಲ್ಲ ಎಂದು ತಿಳಿಸಿದ್ದರು.
ಕಳಪೆ ಪಿಚ್‌ನಲ್ಲಿ ಆಸೀಸ್ ಅಬ್ಬರಿಸಿದ್ದು ಹೇಗೆ?
ಮೊದಲನೆಯದಾಗಿ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್‌ಗೆ ಸರಾಸರಿ ರೇಟಿಂಗ್ ನೀಡುವ ಮೂಲಕ ಐಸಿಸಿ ಪಿಚ್ ಉತ್ತಮವಾಗಿಲ್ಲ ಎಂದು ಖಚಿತಪಡಿಸಿದೆ. ಈಗ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಉದ್ಭವಿಸಬಹುದು, ಹಾಗಾದರೆ ಈ ಪಿಚ್‌ನಲ್ಲಿ ಆಸ್ಟ್ರೇಲಿಯಾ ಆಡಿದ್ದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪಿಚ್‌ನಲ್ಲಿ ಟಾಸ್ ಸೋತಿದ್ದು ಟೀಮ್ ಇಂಡಿಯಾಕ್ಕೆ ಹಿನ್ನಡೆ ಆಯಿತು.
ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು ಮತ್ತು ಟೀಮ್ ಇಂಡಿಯಾವನ್ನು 240 ರನ್‌ಗಳಿಗೆ ಆಲೌಟ್ ಮಾಡಿತು. ಹಗಲಿನಲ್ಲಿ ಪಿಚ್ ಬೌಲರ್‌ಗಳಿಗೆ ಸ್ವಲ್ಪ ಮಟ್ಟಿಗೆ ಸಹಾಯಕವಾಗಿತ್ತು. ಆದರೆ ಭಾರತ ತಂಡ ಬೌಲಿಂಗ್ ಮಾಡುವಷ್ಟರಲ್ಲಿ ಲೈಟ್‌ಗಳು ಆನ್ ಆಗಿದ್ದು ಮೈದಾನದಲ್ಲಿ ಇಬ್ಬನಿಯೂ ಕಾಣಿಸಿಕೊಂಡಿತ್ತು. ಅಂತಹ ಪರಿಸ್ಥಿತಿಯಲ್ಲಿ, ಟೀಮ್ ಇಂಡಿಯಾ ಬೌಲರ್‌ಗಳು ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications