ಒಲಿಂಪಿಯನ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಅವರು ಜ್ಯೂರಿಚ್‌ನಲ್ಲಿ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾದರು. ಇದಾದ ನಂತರ ರೋಜರ್ ನೀರಜ್ ಅವರನ್ನು ತುಂಬಾ ಹೊಗಳಿದ್ದಾರೆ. ಇಬ್ಬರೂ ಆಟಗಾರರು ಸ್ವಿಟ್ಜರ್ಲೆಂಡ್‌ನ ಪ್ರವಾಸೋದ್ಯಮ ರಾಯಭಾರಿಗಳಾಗಿದ್ದಾರೆ.
20 ಬಾರಿ ಟೆನಿಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿರುವ ರೋಜರ್ ಫೆಡರರ್, "ನೀರಜ್ ಅವರ ಏಕಾಗ್ರತೆ, ಶ್ರದ್ಧೆ ಹಾಗೂ ದೃಢಸಂಕಲ್ಪದಿಂದ ವೈಯಕ್ತಿಕವಾಗಿ ಮತ್ತು ಅವರ ದೇಶಕ್ಕಾಗಿ ಎಷ್ಟು ಸಾಧಿಸಿದ್ದಾರೆಂದು ನನಗೆ ಆಶ್ಚರ್ಯವಾಗಿದೆ. ಅವರನ್ನು ಇಲ್ಲಿ ಜ್ಯೂರಿಚ್‌ನಲ್ಲಿ ಭೇಟಿಯಾಗಲು ತುಂಬಾ ಸಂತೋಷವಾಗಿದೆ" ಎಂದು ಹೇಳಿದ್ದಾರೆ.

ನೀರಜ್ ಅವರು ತಮ್ಮ ದೃಢತೆ ಮತ್ತು ದೃಢಸಂಕಲ್ಪದಿಂದ ವೈಯಕ್ತಿಕವಾಗಿ ಮತ್ತು ದೇಶಕ್ಕಾಗಿ ಎಷ್ಟು ಸಾಧನೆ ಮಾಡಿದ್ದಾರೆ ಎಂದು ನನಗೆ ಆಶ್ಚರ್ಯವಾಗಿದೆ ಎಂದು ಫೆಡರರ್ ನೀರಜ್ ಅವರನ್ನು ಹೊಗಳಿದ್ದಾರೆ.
ನೀರಜ್ ಚೋಪ್ರಾಗೆ, ರೋಜರ್ ಫೆಡರರ್ ಅವರ ಭೇಟಿಯು ಕನಸು ಈಡೇರಿದಂತೆ ಆಗಿದೆ. ಫೆಡರರ್ ಅವರನ್ನು ಭೇಟಿಯಾದ ನಂತರ ನೀರಜ್ ಚೋಪ್ರಾ, "ಜುರಿಚ್‌ನಲ್ಲಿ ರೋಜರ್ ಫೆಡರರ್ ಅವರನ್ನು ಭೇಟಿಯಾಗುವುದು ನನಗೆ ಒಂದು ಕನಸು ನನಸಾದ ಕ್ಷಣ. ಅವರ ಕೌಶಲ್ಯ, ನಿಜವಾದ ಕ್ರೀಡಾ ಮನೋಭಾವ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುವ ಅವರ ಸಾಮರ್ಥ್ಯವನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ ಎಂದು ತಿಳಿಸಿದ್ದಾರೆ.
ರೋಜರ್ ನೀರಜ್‌ಗೆ ಹಸ್ತಾಕ್ಷರವಿರುವ ಟೆನಿಸ್ ರಾಕೆಟ್ ನೀಡಿದರೆ, ನೀರಜ್ ಏಷ್ಯನ್ ಗೇಮ್ಸ್‌ನಲ್ಲಿ ಧರಿಸಿದ್ದ ಭಾರತದ ಜೆರ್ಸಿಯನ್ನು ನೀಡಿ ಸಹಿ ಹಾಕಿದರು.

ರೋಜರ್ ಫೆಡರರ್ ತಮ್ಮ ವೃತ್ತಿಜೀವನದಲ್ಲಿ 20 ಗ್ರ್ಯಾಂಡ್ ಸ್ಲಾಮ್‌ಗಳು ಸೇರಿದಂತೆ 103 ಪ್ರಶಸ್ತಿಗಳನ್ನು ಗೆದ್ದ ನಂತರ 2022 ರಲ್ಲಿ ಟೆನಿಸ್‌ನಿಂದ ನಿವೃತ್ತರಾದರು. ಅವರು ವಿಂಬಲ್ಡನ್ ಗ್ರ್ಯಾನ್ ಸ್ಲ್ಯಾಮ್ ಎಂಟು ಬಾರಿ ಗೆದ್ದಿದ್ದಾರೆ. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಮಾತ್ರ ಸ್ವಿಸ್ ತಾರೆಗಿಂತ ಹೆಚ್ಚು ಗ್ರ್ಯಾಂಡ್ ಸ್ಲಾಮ್‌ಗಳನ್ನು ಗೆದ್ದಿದ್ದಾರೆ.
ಫೆಡರರ್ ತಮ್ಮ ವೃತ್ತಿಜೀವನದಲ್ಲಿ 310 ವಾರಗಳ ಕಾಲ ವಿಶ್ವ ನಂ. 1 ಸ್ಥಾನವನ್ನು ಉಳಿಸಿಕೊಂಡಿದ್ದರು. 42 ವರ್ಷ ವಯಸ್ಸಿನ ಫೆಡರರ್ ಎಟಿಪಿ ಟೂರ್‌ನಲ್ಲಿ 1,000 ಕ್ಕೂ ಹೆಚ್ಚು ಗೆಲುವುಗಳನ್ನು ದಾಖಲಿಸಿದ್ದಾರೆ. ಫೆಡರರ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ, ಬೀಜಿಂಗ್ 2008 ರಲ್ಲಿ ಪುರುಷರ ಡಬಲ್ಸ್‌ನಲ್ಲಿ ಚಿನ್ನ ಮತ್ತು ಲಂಡನ್ 2012 ರಲ್ಲಿ ಸಿಂಗಲ್ಸ್‌ನಲ್ಲಿ ಬೆಳ್ಳಿಯ ನಗೆ ಬೀರಿದ್ದಾರೆ.
ನೀರಜ್ ಚೋಪ್ರಾ ಅವರು ಟೋಕಿಯೋ 2020 ರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಮತ್ತು ಚಿನ್ನದ ಪದಕವನ್ನು ಗೆದ್ದಿದ್ದಾರೆ ಮತ್ತು ಅವರು ಎರಡು ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ.ಚೋಪ್ರಾ ಅವರು ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 26 ವರ್ಷದ ಆಟಗಾರ 2022ರಲ್ಲಿ ಡೈಮಂಡ್ ಲೀಗ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ನೀರಜ್ ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಅಲ್ಲದೆ ಜಾವೆಲಿನ್ ಎಸೆತದಲ್ಲಿ ಮೊದಲ ಬಾರಿಗೆ ಚಿನ್ನದ ನಗೆ ಬೀರಿರುವ ಭಾರತದ ಅಥ್ಲೀಟ್ ಇವರಾಗಿದ್ದಾರೆ.