
ಕೋಲ್ಕತ್ತಾ, ನವೆಂಬರ್ 13: ಟೀಮ್ ಇಂಡಿಯಾದ ಉಪನಾಯಕ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಏಕದಿನದಲ್ಲಿ ವಿಶ್ವದಾಖಲೆಯ ಅತ್ಯಧಿಕ ವೈಯಕ್ತಿಕ ರನ್ ಸಿಡಿಸಿದ್ದು ನವೆಂಬರ್ 13ರ ಇದೇ ದಿನ. 2014ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ, ಶ್ರೀಲಂಕಾ ವಿರುದ್ಧದ 4ನೇ ಏಕದಿನದಲ್ಲಿ ರೋಹಿತ್ ಇತಿಹಾಸ ನಿರ್ಮಿಸಿದ್ದರು.
ರೋಹಿತ್ ಅವರಿಂದ ಸೃಷ್ಟಿಯಾದ ಆ ಸ್ಫೋಟಕ ಬ್ಯಾಟಿಂಗ್ ದಾಖಲೆಗೆ ಇಂದಿಗೆ 5 ವರ್ಷಗಳಾಗುತ್ತಿವೆ. ಇಂದಿಗೂ ಆ ದಾಖಲೆ ಮುರಿಯಲಾಗಿಲ್ಲ. ಅಂದಿನ ಪಂದ್ಯದಲ್ಲಿ 173 ಎಸೆತಗಳನ್ನು ಎದುರಿಸಿದ್ದ ಶರ್ಮಾ, 264 ರನ್ ಚಚ್ಚಿದ್ದರು. ಇದರಲ್ಲಿ 33 ಫೋರ್‌ಗಳು, 9 ಸಿಕ್ಸರ್‌ಗಳು ಸೇರಿದ್ದವು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಅಂದು, ಆರಂಭಿಕ ಆಟಗಾರ ಅಜಿಂಕ್ಯ ರಹಾನೆ 28, ರೋಹಿತ್ 264, ನಾಯಕ ವಿರಾಟ್ ಕೊಹ್ಲಿ 66, ಸುರೇಶ್ ರೈನಾ 11, ರಾಬಿನ್ ಉತ್ತಪ್ಪ 16 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 404 ರನ್ ಮಾಡಿತ್ತು.
ಗುರಿ ಬೆನ್ನತ್ತಿದ್ದ ಶ್ರೀಲಂಕಾ, ತಿಲಕರತ್ನೆ ದಿಲ್ಶನ್ 34, ನಾಯಕ ಏಂಜಲೋ ಮ್ಯಾಥ್ಯೂಸ್ 75, ಲಹಿರು ತಿರುಮನ್ನೆ 59, ತಿಸೆರ ಪೆರೆರ 29 ರನ್ ಬೆಂಬಲದೊಂದಿಗೆ 43.1 ಓವರ್‌ಗೆ ಸರ್ವ ಪತನ ಕಂಡು 251 ರನ್ ಪೇರಿಸಿ ಶರಣಾಗಿತ್ತು. ಭಾರತದ ಸ್ಟುವರ್ಟ್ ಬಿನ್ನಿ 2, ಉಮೇಶ್ ಯಾದವ್ 2, ಧವಲ್ ಕುಲಕರ್ಣಿ 4, ಅಕ್ಸರ್ ಪಟೇಲ್ 2 ವಿಕೆಟ್ ಪಡೆದು ಪ್ರವಾಸಿಗರನ್ನು ಕಾಡಿದ್ದರು.